ಮಂಗಳೂರು (ಮುಲ್ಕಿ): ಕಳೆದ ಒಂದು ವಾರದ ಹಿಂದೆ ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ನಾಗರ ಹಾವೊಂದು ಕಂಡು ಬಂದಿದ್ದು ಉತ್ತರ ಕರ್ನಾಟಕದ ಕಾರ್ಮಿಕನೋರ್ವ ಅದಕ್ಕೆ ಡಿಸೇಲ್ ಎರಚಿದ ಘಟನೆ ನಡೆದಿತ್ತು. ಇದರಿಂದಾಗಿ ಹಾವು ಮೈ ಉರಿಯಿಂದ ಒದ್ದಾಡತೊಡಗಿತ್ತು. ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿ ಹಾವಿಗೆ ಸೂಕ್ತ ಚಿಕಿತ್ಸೆ ನೀಡಿ, ಹಾವು ಮತ್ತೆ ಸಹಜ ಸ್ಥಿತಿಗೆ ಮರಳುವಂತೆ ಮಾಡಿದ್ದರು. ಆದರೆ ವಿಚಿತ್ರವೆನ್ನುವಂತೆ ಒಂದು ವಾರದ ಬಳಿಕ ಡಿಸೇಲ್ ಎರಚಿದ ಕಾರ್ಮಿಕ ಮೈ ಉರಿಯ ಸಮಸ್ಯೆಯಿಂದ ನರಳುತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಗರ ಹಾವಿಗೆ ಡಿಸೇಲ್ ಎರಚಿದ ಕಾರಣ ಈ ಸಮಸ್ಯೆ ಪ್ರಾರಂಭವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ನಾಗ-ಭೂಮಿ-ವೃಕ್ಷದ ನಡುವೆ ಅವಿನಾಭಾವ ಸಂಬಂಧವಿದೆ. ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಶಕ್ತಿ ನಾಗ ಎಂದು ಪ್ರಾಚೀನ ಕಾಲದಿಂದಲೂ ತುಳುನಾಡಿನಲ್ಲಿ ನಾಗನನ್ನು ಆರಾಧಿಸಲಾಗುತ್ತಿದೆ. ನಾಗರ ಹಾವಿಗೆ ಡಿಸೇಲ್ ಎರಚಿ ಮೈ ಉರಿ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕನ ಸಮಸ್ಯೆಗೆ ನಾಗ ದೋಷವೇ ಕಾರಣವೆಂದು ಜನರಾಡಿಕೊಳ್ಳುತ್ತಿದ್ದಾರೆ.