ಹಣ ಮಾಡುವ ಉದ್ದೇಶದಿಂದ ತಪ್ಪು ಮಾಡಿದೆ – ಸಿಸಿಬಿ ಮುಂದೆ ಸತ್ಯ ಬಾಯ್ಬಿಟ್ಟ ಚೈತ್ರಾ ಕುಂದಾಪುರ

ಮಂಗಳೂರು(ಬೆಂಗಳೂರು): ಚೈತ್ರಾ ಕುಂದಾಪುರ 5 ಕೋಟಿ ರೂ. ವಂಚನೆ ಮಾಡಿ ಉದ್ಯಮಿಗೆ ನಾಮ ಹಾಕಿದ್ದ ಬಗ್ಗೆ ಇದೀಗ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಹಾಗೂ ಹಾಲಶ್ರೀ ಅವರನ್ನು ಮುಖಾಮುಖಿ ಸಿಸಿಬಿ ತಂಡ ವಿಚಾರಣೆ ನಡೆಸಿದ್ದು ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ.

ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ ಮೊಬೈಲ್ ಕರೆಗಳು, ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್ ಠೇವಣಿ, ಜಪ್ತಿ ಮಾಡಿದ್ದ ಕಾರು, ದಾಖಲೆಗಳನ್ನು ಮುಂದಿಟ್ಟು ಸಿಸಿಬಿ ತಂಡ ಪ್ರಶ್ನೆ ಮಾಡಿತ್ತು.  ದಾಖಲೆ ಕಂಡು ಎಲ್ಲವನ್ನೂ ಬಾಯ್ಬಿಟ್ಟ ಚೈತ್ರಾ, ತಾನು ಹಣ ಮಾಡುವ ಉದ್ದೇಶದಿಂದ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಪರಿಚಿತರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನಲೆಗೆ ತರುವುದು, ಟಿಕೆಟ್ ವಿಚಾರವಾಗಿ ನಂಬಿಕೆ ಬರುವಂತಹ ಸನ್ನಿವೇಶ ಸೃಷ್ಟಿಸುವುದು, ಒಂದು ವೇಳೆ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತಾ ಚೈತ್ರಾ ಪ್ಲ್ಯಾನ್ ಮಾಡಿದ್ದರು. ಅಲ್ಲದೇ, ಯೋಜನೆಯಂತೆ ನಡೆಯದೇ ಟಿಕೆಟ್ ಕೈ ತಪ್ಪಿದರೆ ಏನು ಮಾಡಬೇಕು ಎನ್ನುವ ಬಗ್ಗೆಯೂ ಚೈತ್ರಾ ಗ್ಯಾಂಗ್ ಪ್ಲ್ಯಾನ್ ಮಾಡಿತ್ತು.

ಟಿಕೆಟ್ ಸಿಗದೇ ಹೋದರೆ, ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ್‌ ಜೀಗೆ ಕೊಟ್ಟಿದ್ದಾಗಿ ಹೇಳಿಕೆ ನೀಡಲು ತಂಡ ಸಿದ್ಧತೆ ನಡೆಸಿತ್ತು. ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ, ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಮತ್ತು ವಿಶ್ವನಾಥ್ ಜೀ ಮೃತಪಟ್ಟಿದ್ದಾರೆ ನಮಗೇ ಗೊತ್ತೇ ಇಲ್ಲ ಎಂದು ಹೇಳಲು ತಂಡ ಸಂಚು ರೂಪಿಸಿತ್ತು. ಈ ರೀತಿ ಗೋವಿಂದಬಾಬುಗೆ ಹೇಳಿ ನಂಬಿಸೋ ಪ್ಲ್ಯಾನ್ ಮಾಡಿದ್ದರು. ಅದರಂತೆಯೇ ನಡೆದುಕೊಂಡಿದ್ದರು. 5 ಕೋಟಿ ರೂ. ಪೈಕಿ ಸುಮಾರು ಮೂರುವರೆ ಕೋಟಿ ಚೈತ್ರಾ ಕೈ ಸೇರಿತ್ತು. ಒಂದೂವರೆ ಕೋಟಿ ರೂಪಾಯಿ ಹಾಲಶ್ರೀ ಪಡೆದುಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು ಚೈತ್ರಾ ಸಿಸಿಬಿಗೆ ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಈವರೆಗೆ ಎಂಟು ಜನರನ್ನು ಬಂಧಿಸಲಾಗಿದ್ದು, 2 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ. ಚೈತ್ರಾ ವಂಚನೆ ಪುರಾಣವನ್ನು ಬಹುತೇಕ ಕೆದಕಿರೋ ಸಿಸಿಬಿ, ಉಳಿದ ಕ್ಯಾಶ್ ಬಗ್ಗೆ ತನಿಖೆ ಮುಂದುವರಿಸಿದೆ.

ಇನ್ನೊಂದೆಡೆ, ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಹಣ ಪಡೆದಿದ್ದು ನಿಜ. ಎಂಎಲ್‌ಎ ಟಿಕೆಟ್ ವಿಚಾರವಾಗಿ ಹಣ ಪಡೆದಿದ್ದೆ, ಆದರೆ ಟಿಕೆಟ್ ಸಿಗಲಿಲ್ಲವಾದ್ದರಿಂದ ಹಣ ವಾಪಸ್ ಕೊಡೋದಾಗಿ ಹೇಳಿದ್ದೆ. ಈಗಾಗಲೇ 50 ಲಕ್ಷ ಹಣ ವಾಪಸ್‌ ಕೊಟ್ಟಿದ್ದೇನೆ. ಉಳಿದ ಹಣ ಮಠದಲ್ಲಿದೆ. ನನ್ನದೇನೂ ತಪ್ಪಿಲ್ಲ, ಚೈತ್ರಾ ಹೇಳಿದಂತೆ ಕೇಳಿದ್ದೀನಿ. ತಪ್ಪಿಗೆ ನಾನೇ ಹೊಣೆಯಾಗಿದ್ದು, ಬೇರೆ ಯಾರೂ ಈ ಕೇಸ್ ನಲ್ಲಿ ಇಲ್ಲ ಎಂದು ಅಭಿನವ ಹಾಲಶ್ರೀ ಸ್ವಾಮೀಜಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here