ವಿಕ್ರಮ್ ಲ್ಯಾಂಡರ್ ಪುನಶ್ಚೇತನಕ್ಕೆ 14 ದಿನ ಇಸ್ರೊ ಕಾಯಲಿದೆ -‌ ಇಸ್ರೋ ಅಧ್ಯಕ್ಷ ಎಸ್.‌ ಸೋಮನಾಥ್

ಮಂಗಳೂರು(ಬೆಂಗಳೂರು): ಮಹತ್ವಾಕಾಂಕ್ಷಿ ಚಂದ್ರಯಾನ-3 ಮಿಷನ್ ನ ಬೋನಸ್ ಹಂತವನ್ನು ಆರಂಭಿಸುವ ಉದ್ದೇಶದಿಂದ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಗೆ ಪುನಶ್ಚೇತನ ನೀಡುವ ಪ್ರಯತ್ನವನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಚಂದ್ರನಲ್ಲಿನ ಮುಂದಿನ ಸೂರ್ಯಾಸ್ತವರೆಗೂ ಅಂದರೆ ಅಕ್ಟೋಬರ್ 6ರವರೆಗೂ ಮುಂದುವರಿಸಲಿದೆ.

ಆದರೆ 14 ದಿನಗಳ ಕಾರ್ಯಾಚರಣೆ ಬಳಿಕ ನಿಷ್ಕ್ರಿಯ ಸ್ಥಿತಿಯಲ್ಲಿರುವ ವಿಕ್ರಂ ಹಾಗೂ ರೋವರ್ ಜತೆ ಯಾವಾಗ ಸಂಪರ್ಕ ಸಾಧಿಸಲು ಸಾಧ್ಯವಾಗಬಹುದು ಎಂಬ ಬಗ್ಗೆ ನಿಶ್ಚಿತತೆ ಇಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಸ್ಪಷ್ಟಪಡಿಸಿದ್ದಾರೆ. ಅದು ಯಾವಾಗ ಎದ್ದೇಳುತ್ತದೆ ಎನ್ನುವುದು ತಿಳಿಯದು. ಅದು ನಾಳೆಯೂ ಆಗಿರಬಹುದು ಅಥವಾ ಚಂದ್ರದಿನದ ಕೊನೆಯ ದಿನವೂ ಆಗಿರಬಹುದು. ಆದರೆ ನಮ್ಮ ಪ್ರಯತ್ನ ನಡೆಯುತ್ತಿದೆ. ಇವೆರಡೂ ಪುನಶ್ಚೇತನಗೊಂಡರೆ ಅದು ಮಹತ್ವದ ಸಾಧನೆಯಾಗಲಿದೆ ಎಂದು ಹೇಳಿದ್ದಾರೆ.

ಹದಿನಾಲ್ಕು ದಿನಗಳ ಕಾಲ ಅಂದರೆ ಒಂದು ಚಂದ್ರದಿನದ ವೇಳೆ ಸಂಪೂರ್ಣ ಕತ್ತಲು ಮತ್ತು ಮೈನಸ್ 200 ರಿಂದ 250 ಡಿಗ್ರಿ ಸೆಂಟಿಗ್ರೇಡ್ ಶೀತದ ವಾತಾವರಣದಲ್ಲಿದ್ದ ಲ್ಯಾಂಡರ್ ಮತ್ತು ರೋವರ್ ಸಾಧನಗಳಿಗೆ ವಿದ್ಯುತ್ ದಾಸ್ತಾನು ಮಾಡುವ ಬ್ಯಾಟರಿಗಳಿಗೆ ಧಕ್ಕೆ ಉಂಟಾಗಿ ಇದು ಸ್ಪಂದಿಸದೇ ಇರುವ ಸಾಧ್ಯತೆಯೂ ಇದೆ. ಆದರೆ ಚಂದ್ರದಿನ ಮುಂದುವರಿದಂತೆ ಅಂದರೆ ಚಂದ್ರನ ಮೇಲ್ಮೈ ಉಷ್ಣತೆ ಹೆಚ್ಚಿದಂತೆಲ್ಲ ಇದು ಪುನಶ್ಚೇತನಗೊಳ್ಳುವ ಸಾಧ್ಯತೆಯೂ ಅಧಿಕವಾಗಿರುತ್ತದೆ ಎನ್ನುವುದು ವಿಜ್ಞಾನಿಗಳ ನಿರೀಕ್ಷೆ. ಅತ್ಯಂತ ಕಡಿಮೆ ತಾಪಮಾನದಲ್ಲಿ ಕೂಡಾ ರೋವರ್ ಸುಸ್ಥಿತಿಯಲ್ಲಿ ಉಳಿಯುವುದಕ್ಕೆ ಸಂಬಂಧಿಸಿದಂತೆ ಪ್ರಯೋಗಗಳು ನಡೆದಿದ್ದರೂ, ವಿಕ್ರಂ ಬಗ್ಗೆ ಅಂಥ ಪ್ರಯೋಗ ನಡೆದಿಲ್ಲ ಎಂದು ಸೋಮನಾಥ್ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here