ಸಿಕ್ಕಿಂನಲ್ಲಿ ಮೇಘಸ್ಫೋಟ – 23 ಸೇನಾ ಸಿಬ್ಬಂದಿ ನಾಪತ್ತೆ – ಯೋಧರ ಪತ್ತೆಗೆ ವ್ಯಾಪಕ ಶೋಧ

ಮಂಗಳೂರು(ಸಿಕ್ಕಿಂ): ಸಿಕ್ಕಿಂನಲ್ಲಿ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಇದರ ಪರಿಣಾಮ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾಗಿರುವ ಯೋಧರ ಪತ್ತೆಗೆ ವ್ಯಾಪಕ ಶೋಧ ನಡೆಸಲಾಗುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಸೇನೆಯ ಪೂರ್ವ ಕಮಾಂಡ್‌ ಹೇಳಿಕೆ ನೀಡಿದ್ದು, ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದಾಗಿ ಲಾಚೆನ್ ಕಣಿವೆಯ ಉದ್ದಕ್ಕೂ ಕೆಲವು ಸಂಸ್ಥೆಗಳಿಗೆ ಹಾನಿಯಾಗಿದೆ ಎಂದು ಹೇಳಿದೆ. ಚುಂಗ್ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನೀರಿನ ಮಟ್ಟವು 15-20 ಅಡಿ ಎತ್ತರದವರೆಗೆ ಹಠಾತ್ ಹೆಚ್ಚಳಕ್ಕೆ ಕಾರಣವಾಯಿತು. ಇದು ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿಲುಗಡೆ ಮಾಡಲಾಗಿದ್ದ ಸೇನಾ ವಾಹನಗಳಿಗೆ ಹಾನಿಯುಂಟು ಮಾಡಿದೆ. ಘಟನೆಯಿಂದಾಗಿ 23 ಸಿಬ್ಬಂದಿ ಕಾಣೆಯಾಗಿದ್ದಾರೆ ಮತ್ತು ಕೆಲವು ವಾಹನಗಳು ಮುಳುಗಿವೆ. ಕೆಸರಿನ ಅಡಿಯಲ್ಲಿ ಸಿಲುಕಿರುವವರಿಗೆ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿಕೆಯಲ್ಲಿ ಭಾರತೀಯ ಸೇನೆ ತಿಳಿಸಿದೆ. ಸಿಕ್ಕಿಂನಲ್ಲಿ ಮಂಗಳವಾರ ರಾತ್ರಿಯಿಡೀ ಭಾರೀ ಮಳೆಯಾದ ಪರಿಣಾಮ ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಬಳಿ ಮೇಘಸ್ಫೋಟ ಉಂಟಾದ ಪರಿಣಾಮ, ಸರೋವರವು ಉಕ್ಕಿ ಹರಿದಿದೆ. ಅಲ್ಲದೇ, ಇದರಿಂದಾಗಿ ತೀಸ್ತಾ ನದಿಯಲ್ಲಿ ನೀರಿನ ಮಟ್ಟವು ದಿಢೀರಾಗಿ ಹೆಚ್ಚಳಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ.

ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ತೀಸ್ತಾ ನದಿಯು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿದು ಹೋಗುತ್ತದೆ.ಮೇಘಸ್ಫೋಟದ ಬಳಿಕ ಸಿಕ್ಕಿಂನ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ. ನದಿಯು ಉಕ್ಕಿ ಹರಿಯುತ್ತಿರುವ ಹಾಗೂ ರಸ್ತೆಗಳು ಕೊಚ್ಚಿಕೊಂಡು ಹೋಗುತ್ತಿರುವ ಭಯಾನಕ ದೃಶ್ಯಗಳನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಮೇಘಸ್ಫೋಟದಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತುಂಬಾ ಹಾನಿಯಾಗಿದೆ. ಸಿಂಗ್ಟಮ್ನಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಘಟನೆ ನಡೆದ ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ತಿಳಿಸಿದ್ದಾರೆ. ಈ ನಡುವೆ ಗಜೋಲ್ಡೋಬಾ, ಡೊಮೊಹಾನಿ, ಮೆಖಲಿಗಂಜ್ ಮತ್ತು ಘಿಶ್‌ನಂತಹ ತಗ್ಗು ಪ್ರದೇಶಗಳಲ್ಲಿರುವ ಜನರು ಜಾಗರೂಕರಾಗಿರುವಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here