ಕಾನೂನು ಬಾಹಿರ ಗಣಿಗಾರಿಕೆಗೆ ಅವಕಾಶವಿಲ್ಲ- ಮರಳು, ಕೆಂಪು ಕಲ್ಲು ಗಣಿಗಾರಿಕೆ ಕುರಿತ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಮಂಗಳೂರು(ಉಡುಪಿ): ಉಡುಪಿ ಜಿಲ್ಲೆಯಲ್ಲಿ ಮರಳು, ಕೆಂಪು ಕಲ್ಲು ಹಾಗೂ ಇನ್ನಿತರ ಉಪಖನಿಜ ಗಣಿಗಾರಿಕೆ ವಿಷಯಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಅ.5ರಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮರಳು, ಕೆಂಪು ಕಲ್ಲಿನ ವಿಚಾರದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಕೊಡಬಾರದು. ಕಾನೂನು ಬಾಹಿರ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್‌ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ಪ್ರಾಧಿಕಾರದ ತಿಂಗಳಿಗೊಮ್ಮೆ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಸೂಚಿಸಿದರು. ನಾನ್ ಸಿಆರ್‌ಝೆಡ್ ಪ್ರದೇಶದಲ್ಲಿ ಟೆಂಡರ್ ಕಂ ಹರಾಜು ಮೂಲಕ ಗುತ್ತಿಗೆ ಮಂಜೂರು ಮಾಡಲು 39 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಈ ಪೈಕಿ 9 ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆ ಯಶಸ್ವಿಯಾಗಿದ್ದು, 30 ಮರಳು ಬ್ಲಾಕ್ ಗಳಿಗ ಮರುಹಾರಾಜು ಪ್ರಕ್ರಿಯೆ ಶೀಘ್ರ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಭೆಗೆ ಮಾಹಿತಿ ನೀಡಿದರು. 8 ಲಕ್ಷ ಟನ್ ಮರಳು ಅಗತ್ಯವಿದೆ. ಜಲ್ಲಿ, ಕೆಂಪುಕಲ್ಲಿನ ಸಮಸ್ಯೆ ಇದೆ. ಮರಳು ಗಣಿಗಾರಿಕೆಗೆ ಪರವಾನಿಗೆಯನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡಬೇಕು. ಮನೆ ಕಟ್ಟಲು ಅಗತ್ಯವಿರುವ ಸೈಜುಗಲ್ಲುಗಳಿಗೆ ಗಣಿಗಾರಿಕೆ ಮಾಡಲು ಕಾಯ್ದೆಯ ಸರಳೀಕರಣ ಮಾಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.

ಕೆಂಪುಕಲ್ಲಿನ ಗಣಿಗಾರಿಕೆಗೆ 71 ಕಾರ್ಯಾದೇಶಗಳನ್ನು ಒಂದು ವರ್ಷದ ಅವಧಿಗೆ ನೀಡಲಾಗಿದೆ. ಖನಿಜವನ್ನು ಬಾಕ್ಸೈಟ್ ಆಗಿ ವಿಂಗಡಿಸಿರುವುದರಿಂದ 2023ರ ಮಾ.17ರಂದು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994ಕ್ಕೆ ತಿದ್ದುಪಡಿ ತಂದು ತಿದ್ದುಪಡಿ ನಿಯಮ 2023 ಜಾರಿಗೊಳಿಸಲಾಗಿದೆ. ಹೀಗಾಗಿ ಲ್ಯಾಟರೈಟ್ ಖನಿಜಕ್ಕೆ ಕಾರ್ಯಾದೇಶ ನೀಡುವುದನ್ನು ಕೈಬಿಡಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು. ಸ್ಥಳೀಯ ಜಿಲ್ಲೆಗೆ ಅಗತ್ಯವಿರುವಂತೆ ಕಾಯ್ದೆಗೆ ತಿದ್ದುಪಡಿ ಮಾಡಬಹುದು. ಕೆಂಪು ಕಲ್ಲಿಗೆ ಸಂಬಂಧಿಸಿದಂತೆ ಹಿಂದಿನ ಸರಕಾರ ಮಾಡಲಾಗಿರುವ ತಿದ್ದುಪಡಿ ಯನ್ನು ಮತ್ತೆ ತಿದ್ದುಪಡಿ ಮಾಡಿ ವಾಹನಗಳಿಗೆ ಅನುಮತಿ ನೀಡಬಹುದು. ಕ್ರಶಿಂಗ್ ಮಾಡಲಾದ ಮಣ್ಣನ್ನು ಜಿಲ್ಲೆಯೊಳಗಿನ ಬಳಕೆಗೆ ಮಾತ್ರ ಸೀಮಿತ ಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ಸಭೆಯಲ್ಲಿ ತರಲಾಯಿತು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟ ಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಚಿವರಾದ ಎಚ್.ಸಿ. ಮಹದೇವಪ್ಪ, ಚಲುವರಾಯಸ್ವಾಮಿ, ಬಿ.ನಾಗೇಂದ್ರ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮುಖಂಡರಾದ ಗೋಪಲ್ ಪೂಜಾರಿ, ಪ್ರಸಾದ್‌ರಾಜ್ ಕಾಂಚನ್, ಉದಯ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಗಿರೀಶ್, ಎಸ್ಪಿ ಡಾ.ಕೆ.ಅರುಣ್, ಜಿಪಂ ಸಿಇಒ ಪ್ರಸನ್ನ ಹಾಜರಿದ್ದರು.

 

 

LEAVE A REPLY

Please enter your comment!
Please enter your name here