ರಾಹುಲ್‌ ಗಾಂಧಿಯನ್ನು ರಾವಣನಂತೆ ಚಿತ್ರಿಸಿದ ಪೋಸ್ಟರ್‌ – ಕೋರ್ಟ್‌ ಮೊರೆ ಹೋದ ಕಾಂಗ್ರೆಸ್‌

ಮಂಗಳೂರು(ಜೈಪುರ): ರಾಹುಲ್‌ ಗಾಂಧಿ ಅವರನ್ನು ‘ನವಯುಗ ರಾವಣ’ನಂತೆ ಚಿತ್ರಿಸಿದ ಪೋಸ್ಟರ್‌ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ ಅಮಿತ್ ಮಾಳವೀಯಾ ವಿರುದ್ಧ ರಾಜಸ್ಥಾನ ಕಾಂಗ್ರೆಸ್‌ ನಾಯಕ ಜಸ್ವಂತ್ ಗುರ್ಜರ್‌ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 499, 500, 504 ಅಡಿಯಲ್ಲಿ ಬಿಜೆಪಿಯ ಇಬ್ಬರೂ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಗುರ್ಜರ್ ಜೈಪುರದ ಮೆಟ್ರೊಪಾಲಿಟನ್‌ ಕೋರ್ಟ್‌–11ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಇದೇ 9ರಂದು ಆಲಿಸಲು ನ್ಯಾಯಾಲಯ ನಿರ್ಧರಿಸಿದೆ. ರಾಹುಲ್‌ ಗಾಂಧಿ ಅವರಿಗೆ ಹತ್ತು ತಲೆಗಳಿರುವಂತೆ ಚಿತ್ರಿಸಿ, ಅದಕ್ಕೆ ‘ರಾವಣ’ ಎಂದು ಶೀರ್ಷಿಕೆ ನೀಡಿದ ಪೋಸ್ಟರ್‌ ಅನ್ನು ಬಿಜೆಪಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು. ‘ಹೊಸ ಯುಗದ ರಾವಣ ಇಲ್ಲಿದ್ದಾನೆ. ಈತ ದುಷ್ಟ, ಧರ್ಮ ವಿರೋಧಿ. ರಾಮನ ವಿರೋಧಿ. ಈತನ ಗುರಿ ಭಾರತವನ್ನು ನಾಶ ಮಾಡುವುದಾಗಿದೆ’ ಎಂದು ಬರೆದುಕೊಂಡಿತ್ತು. ಇದನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್‌, ‘ಕೇಸರಿ ಪಕ್ಷದ ಉಗ್ರ ಟೀಕಾಕಾರ ರಾಹುಲ್‌ ಅವರನ್ನು ಕೊಲ್ಲುವ ನೀಚ ಉದ್ದೇಶವನ್ನು ಬಿಜೆಪಿ ಹೊಂದಿದೆ’ ಎಂದು ಆರೋಪಿಸಿತ್ತು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here