ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿ ನೀಡಿದ ಹೊಸ “ಅಸ್ತ್ರ”
ಗಾಂಧಿಯವರು ಭಾರತದ ರಾಜಕಾರಣವನ್ನು ಪ್ರವೇಶೀಸುವುದಕ್ಕೆ ಮುಂಚಿನಿಂದಲೂ ಹಲವಾರು ವರ್ಷಗಳ ಕಾಲ ಬ್ರಿಟಿಷರ ವಿರುದ್ದ ನಾನಾ ಬಗೆಯ ಹೋರಾಟಗಳು ನಡೆದಿದ್ದವು. ಇವೆಲ್ಲವೂ ಆಯುಧಗಳನ್ನು ಹಿಡಿದು ರಕ್ತ ಹರಿಸಿ ನಡೆಸಿದ ಹೋರಾಟಗಳಾಗಿದ್ದವು. ಕೆಲವಂತೂ ಹಿಂಸೆಯಿಂದ ಕೂಡಿದ ಸೇಡಿನ ರೂಪದ ಭಯೋತ್ಪಾದಕ ಹೋರಾಟಗಳಾಗಿದ್ದವು. ಕ್ರಾಂತಿಕಾರಿಗಳು ಎಂದು ಕರೆದುಕೊಂಡು ಕೊಲೆಗಳಲ್ಲಿ ತೊಡಗಿದ್ದ ಗುಂಪುಗಳ ವಿರುದ್ಧ ಗಾಂಧಿ ಬೇಸರ ಗೊಂಡಿದ್ದರು. ನಮ್ಮ ಸ್ವಾತಂತ್ರ್ಯ ಹೋರಾಟವು ಅಹಿಂಸಾತ್ಮಕವಾಗಿಯೇ ನಡೆಯಬೇಕು ಎಂದು ಅವರು ಬಲವಾಗಿ ನಂಬಿದ್ದರು. 1909ರಲ್ಲಿಯೇ ಅವರು “ಹಿಂದ್ ಸ್ವರಾಜ್” ಎಂಬ ಪುಸ್ತಕವನ್ನು ಬರೆದು ದೇಶದ ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ನಡೆಯುವ ಎಲ್ಲ ರೀತಿಯ ಹಿಂಸಾತ್ಮಕ ಚಟುವಟಿಕೆಗಳನ್ನು ಖಂಡಿಸಿದ್ದಾರೆ.