ಗಾಂಧೀಜಿ ನೇತೃತ್ವದ ಬೃಹತ್ ಚಳುವಳಿಗಳು
1919ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡ ಜರುಗಿತು. ಸಾವಿರಕ್ಕೂ ಹೆಚ್ಚು ನಿರಾಯುಧ ಸಾರ್ವಜನಿಕರು ಗುಂಡಿಗೆ ಬಲಿಯಾದರು. ಇಡೀ ದೇಶವು ತಲ್ಲಣಗೊಂಡಿತು. ಗಾಂಧಿ ಬ್ರಿಟಿಷ್ ಸರ್ಕಾರದ ಅಮಾನುಷತೆಯನ್ನು ಖಂಡಿಸಿದ್ದರ ಜೊತೆಗೆ ದೇಶೀಯರ ಹಿಂಸಾಕೃತ್ಯಗಳನ್ನು ಖಂಡಿಸಿದರು. ಗಾಂಧಿ 1920 ರಿಂದ 1942ರವರೆಗೆ “ಖಿಲಾಫತ್ ಚಳುವಳಿʼ, ಅಸಹಕಾರ ಚಳುವಳಿ”, “ಉಪ್ಪಿನ ಸತ್ಯಾಗ್ರಹ”, “ಶಾಸನಭಂಗ ಚಳುವಳಿ” ಮತ್ತು “ದೇಶ ಬಿಟ್ಟು ತೊಲಗಿ” ಎಂಬ ಐದು ಬೃಹತ್ ಚಳುವಳಿಗಳನ್ನು ನಡೆಸಿದರು. ಇವು ದೇಶದ ಬಹು ಭಾಗಗಳನ್ನು ಆವರಿಸಿಕೊಂಡ ಗಾಂಧಿ ನೇತೃತ್ವದ ಚಳುವಳಿಗಳಾಗಿದ್ದವು. ಇವೆಲ್ಲಾ ದೇಶವು ಹಿಂದೆಂದೂ ಕಂಡರಿಯದಂತಹ ಅಹಿಂಸಾತ್ಮಕ ಚಳುವಳಿಗಳಾಗಿದ್ದವು.