ಮಂಗಳೂರು: ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದ.ಕ ದ ಹೆಬ್ಬಾಗಿಲು ಚಾರ್ಮಾಡಿ ಘಾಟ್ ಹೆದ್ದಾರಿಯ ಅಭಿವೃದ್ಧಿಗೆ ಅನುಮತಿ ನೀಡಿದೆ. ಈ ಮೂಲದ ಚಾರ್ಮಾಡಿ ಘಾಟ್ ದ್ವಿಪಥ ಹೆದ್ದಾರಿಯಾಗಿ ಬದಲಾಗಲಿದೆ. ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಗಳ ನಡುವೆ 25 ಕಿಮೀ ವ್ಯಾಪ್ತಿಯನ್ನು ಚಾರ್ಮಾಡಿ ಘಾಟ್ ಹೆದ್ದಾರಿ ಹೊಂದಿದೆ.
ಚಾರ್ಮಾಡಿ ಹಳ್ಳದಿಂದ ಘಾಟ್ ನ 11ನೇ ತಿರುವಿನವರೆಗಿನ 11.2 ಕಿ.ಮೀ ವ್ಯಾಪ್ತಿಯ ಹೆದ್ದಾರಿಯ ಅಭಿವೃದ್ಧಿಯಾಗಲಿದೆ. ಅಭಿವೃದ್ಧಿ ಆಗುತ್ತಿರುವ ರಸ್ತೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರಲಿದೆ. 10 ಮೀ ಅಗಲದ ದ್ವಿಪಥ ರಸ್ತೆ 490 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದ್ದು ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಚಾರ್ಮಾಡಿ ಘಾಟ್ ನಲ್ಲಿ ದ್ವಿಪಥ ರಸ್ತೆ ನಿರ್ಮಾಣದಿಂದ ವಾಹನಗಳ ಸಂಚಾರ ಹೆಚ್ಚಾಗಲಿದ್ದು, ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆಯಿದೆ.