ಮಂಗಳೂರು(ಹಾಸನ): ಯುದ್ಧಪೀಡಿತ ಇಸ್ರೇಲ್ನಲ್ಲಿ ಹಾಸನ ಜಿಲ್ಲೆಯ 20 ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿಕೊಂಡಿದ್ದಾರೆ.
ಸಕಲೇಶಪುರ ತಾಲ್ಲೂಕಿನ ನವೀನ್ ಕುಟುಂಬದವರು, ನಾವು ಸುರಕ್ಷಿತವಾಗಿದ್ದೇವೆ ಎಂಬ ಸಂದೇಶವನ್ನು ತಮ್ಮ ಕುಟುಂಬಸ್ಥರಿಗೆ ರವಾನಿಸಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಡಿಂಕ, ಸಕಲೇಶಪುರ ತಾಲ್ಲೂಕಿನ ಲಕ್ಕುಂದ, ಅಂಕಿಹಳ್ಳಿ, ಬೆಳಗೊಡು ಗ್ರಾಮದವರು ಇಸ್ರೇಲ್ನಲ್ಲಿ ನೆಲೆಸಿದ್ದಾರೆ. ಜಾನ್ಸನ್, ನವೀನ್, ಡೀನಾ ಡಿಸೋಜಾ, ಎಲಿಜಾ ಪಿಂಟೋ, ಅಂತೋನಿ ಡಿಸೋಜಾ ಇವರು ಚನ್ನರಾಯಪಟ್ಟಣ ಮೂಲದವರು. ಕೃಷ್ಣೇಗೌಡ ಅವರು ಸಕಲೇಶಪುರ ತಾಲ್ಲೂಕಿನವರು. ಇವರೆಲ್ಲ ಇಸ್ರೇಲ್ನಲ್ಲಿ ನರ್ಸಿಂಗ್ ಹಾಗೂ ಇತರೆ ಉದ್ಯೋಗ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೆರುಸಲೇಮ್, ತಲ್ಹಿವಿಯಲ್ಲಿ ನೆಲೆಸಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಡಿಂಕ ಗ್ರಾಮದ ಕೃಷ್ಣೇಗೌಡ ಹೋಟೆಲ್ನಲ್ಲಿ ಕೆಲಸ ಮಾಡುತ್ತ ಸುಮಾರು 20 ವರ್ಷಗಳಿಂದ ಇಸ್ರೇಲ್ನಲ್ಲಿ ನೆಲೆಸಿದ್ದಾರೆ. ತನ್ನ ಸಹೋದರ ಮಹದೇವ ಅವರೊಂದಿಗೆ ಫೋನ್ನಲ್ಲಿ ಕೃಷ್ಣೇಗೌಡ ಮಾತನಾಡಿದ್ದು ಯುದ್ಧ ನಡೆಯುತ್ತಿದೆ, ರಾಕೆಟ್ಗಳು ದಾಳಿ ಮಾಡುತ್ತಿರುವುದು ಕಾಣುತ್ತಿದೆ. ನಾನು ಸುರಕ್ಷಿತವಾಗಿದ್ದೇನೆ. ಒಂದು ವಾರ ಕಾಯುತ್ತೇನೆ ಎಂದು ತಿಳಿಸಿದ್ದಾರೆ.