ತೆಲಂಗಾಣದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಹೊರಹೊಮ್ಮಲಿದೆ – ಎಬಿಪಿ ಸಿ-ವೋಟರ್‌ ಸಮೀಕ್ಷೆ

ಮಂಗಳೂರು(ಹೊಸದಿಲ್ಲಿ): ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ನಡೆಸಲಾದ ಎಬಿಪಿ-ಸಿವೋಟರ್‌ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಪಕ್ಷ 48ರಿಂದ 60 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಿವೋಟರ್‌ ಸಮೀಕ್ಷೆಯ ವರದಿ ಹೇಳಿದೆ. ರಾಜ್ಯದಲ್ಲಿ ಪ್ರಸಕ್ತ ಆಡಳಿತದಲ್ಲಿರುವ ಭಾರತ ರಾಷ್ಟ್ರ ಸಮಿತಿ 43ರಿಂದ 55 ಸ್ಥಾನಗಳನ್ನು ಗೆಲ್ಲಬಹುದೆಂದು ಸಮೀಕ್ಷೆ ಹೇಳಿದೆ.

2018 ಚುನಾವಣೆಯಲ್ಲಿ ಕಾಂಗ್ರೆಸ್‌ ಗಳಿಸಿದ ಒಟ್ಟು ಮತ ಪ್ರಮಾಣ ಶೇ 28.3 ಆಗಿದ್ದರೆ ಅದು ಮುಂದಿನ ಚುನಾವಣೆಯಲ್ಲಿ 38.8ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಬಿಆರ್‌ಎಸ್‌ ಕಳೆದ ಚುನಾವಣೆಯಲ್ಲಿ ಪಡೆದ ಮತ ಪ್ರಮಾಣ ಶೇ 46.9 ಆಗಿದ್ದರೆ ಅದು ಶೇ37.5ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಬಿಜೆಪಿಯ ಮತ ಹಂಚಿಕೆ ಪ್ರಮಾಣ ಶೇ 7 ರಿಂದ ಶೇ 16.3ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಸಿ-ವೋಟರ್‌ ನವೆಂಬರ್‌ 2018 ಸಮೀಕ್ಷೆಯು ತೆಲಂಗಾಣದಲ್ಲಿ ಕಾಂಗ್ರೆಸ್-ಟಿಡಿಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಹೇಳಿತ್ತು. ಆದರೆ ಬಿಆರ್‌ಎಸ್‌ಗೆ ಒಟ್ಟು 88 ಸ್ಥಾನಗಳು ದೊರಕಿದ್ದರೆ, ಕಾಂಗ್ರೆಸ್‌ ಪಕ್ಷಕ್ಕೆ 19, ಟಿಡಿಪಿಗೆ 19, ಎಐಎಂಐಎಂಗೆ 2 ಮತ್ತು ಬಿಜೆಪಿಗೆ ಒಂದು ಸ್ಥಾನ ಲಭಿಸಿದ್ದವು. ನಂತರ 12 ಕಾಂಗ್ರೆಸ್‌ ಶಾಸಕರು ಬಿಆರ್‌ಎಸ್‌ಗೆ ಪಕ್ಷಾಂತರ ಮಾಡಿದ್ದರು.

LEAVE A REPLY

Please enter your comment!
Please enter your name here