ಕೆನರಾ ಇಂಜಿನಿಯರಿಂಗ್ ಕಾಲೇಜಿನ ಇನ್ನೋವೇಟಿವ್‌ ಕೌನ್ಸಿಲ್ ಸಾಧನೆ – ಸ್ಪ್ಲಿಟ್ ಫಾಸ್ಟ್ ಚಾರ್ಜಿಂಗ್ ಪರೀಕ್ಷೆ ಯಶಸ್ವಿ – ಚಾರ್ಜಿಂಗ್ ನಲ್ಲಿ ಹೊಸ ಅಲೆ

ಮಂಗಳೂರು: ಸ್ಪ್ಲಿಟ್ ಫಾಸ್ಟ್ ‌ಚಾರ್ಜಿಂಗ್ ತಂತ್ರಜ್ಞಾನ ಬಳಸಿ ಬ್ಯಾಟರಿಗಳನ್ನು ತ್ವರಿತವಾಗಿ ಚಾರ್ಜಿಂಗ್ ಹೇಗೆ ಮಾಡಬಹುದು ಎನ್ನುವ ಹೊಸತನದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿ ದೃಢೀಕರಿಸುವ ಮೂಲಕ‌ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಇನ್ಸ್ಟಿಟ್ಯೂಶನಲ್ ಇನ್ನೋವೇಟಿವ್ ಕೌನ್ಸಿಲ್ ಚಾರ್ಜಿಂಗ್ ವಿಷಯದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಮಂಗಳೂರಿನ ಸ್ಟಾರ್ಟ್ ಅಪ್ ಕಂಪನಿಯಾದ ಇನ್‌ಫೈನರ್ಸೋಲ್‌ ನ ಸಹಯೋಗದೊಂದಿಗೆ ನಡೆಸಿದ ಪ್ರಯೋಗದಿಂದ ಅತೀ ಕಡಿಮೆ ಅವಧಿಯಲ್ಲಿ ವೇಗವಾಗಿ ಬ್ಯಾಟರಿ ಚಾರ್ಜಿಂಗ್ ಮಾಡುವಲ್ಲಿ ಯಶಸ್ಸು ಕಂಡಿರುವ ಕಾಲೇಜಿನ ಐಐಸಿ ಚಾರ್ಜಿಂಗ್ ಸಂಬಂಧಿಸಿದಂತೆ, ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದಿದೆ.

ಸಂಶೋಧನಾ, ನಾವಿನ್ಯತೆಯ ಚಟುವಟಿಕೆಗಳನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದಿರುವ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಐಐಸಿ ಇದೀಗ ಮಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಇನ್‌ಫೈನರ್ಸೋಲ್‌ ಪಾಲುದಾರರಾದ ಶಶಿಕುಮಾರ್ ಮತ್ತು ಕಿಶೋರ್ ಭಟ್ ಅಭಿವೃದ್ಧಿಪಡಿಸಿರುವ ಸ್ಪ್ಲಿಟ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪ್ರಯೋಗಕ್ಕೆ ಅಳವಡಿಸಿ ಯಶಸ್ಸನ್ನು ದೃಢೀಕರಿಸಿದೆ. ಬೇರೆ ಬೇರೆ ರೇಟಿಂಗ್‌ನ ವಿದ್ಯುತ್ ಚಾರ್ಜಿಂಗ್ ಪರೀಕ್ಷೆಗಳನ್ನು ಮಾಡಲಾಗಿದ್ದು ಸಹಜವಾಗಿ ಚಾರ್ಜಿಂಗ್ ಅವಧಿಯ ಶೇ. 50ಕ್ಕೂ ಹೆಚ್ಚಿನ ಸಮಯವನ್ನು ಉಳಿಸಿ, ಈ ತಂತ್ರಜ್ಞಾನದ ಮೂಲಕ ವೇಗವಾಗಿ ಚಾರ್ಜಿಂಗ್ ಮಾಡಬಹುದು ಎನ್ನುವುದು ದೃಢಪಟ್ಟಿದೆ. ಈ ಹೊಸತನದ ಚಾರ್ಜಿಂಗ್, ಅದರಲ್ಲೂ ಇ-ವಹಿಕಲ್‌ಗಳ ಚಾರ್ಜಿಂಗ್ ವಿಳಂಬವಾಗುವ ಸಮಸ್ಯೆಯನ್ನು ನಿವಾರಿಸಿ ಈ ನಿಟ್ಟಿನಲ್ಲಿ ಹೊಸ ಅಲೆ ಸೃಷ್ಟಿಸುವ ಸಾಧ್ಯತೆಗಳಿವೆ. ಈ ಶೋಧನೆಗೆ ಪೇಟೆಂಟ್ ಮಾನ್ಯತೆಯೂ ಲಭಿಸಿದೆ.

ಹಳೆಯ ರಿಕ್ಷಾಗಳನ್ನು ಎಲೆಕ್ಟ್ರಿಕ್ ರಿಕ್ಷಾಗಳನ್ನಾಗಿ ಪರಿವರ್ತಿಸುವಲ್ಲಿ ಪ್ರಾರಂಭಿಕ ಯಶಸ್ಸು ಗಳಿಸಿರುವ ಐಐಸಿ  ಇದೀಗ ಹೊಸ ಚಾರ್ಜಿಂಗ್ ತಂತ್ರಜ್ಞಾನದ ಪ್ರಯೋಗವನ್ನು ರಿಕ್ಷಾಗಳಿಗೂ ಅಳವಡಿಸಲು ಮುಂದಾಗಿದೆ. ಪ್ಲಾಸ್ಟಿಕ್ ಮರುಬಳಕೆ, ಕೃಷಿ ತಂತ್ರಜ್ಞಾನ, ಇ-ರಿಕ್ಷಾ ಹೀಗೆ ಹಲವು ಹೊಸ ಪ್ರಯೋಗಗಳು, ಅವುಗಳನ್ನು ಮಾರ್ಕೆಟಿಂಗ್ ಉತ್ಪನ್ನವಾಗಿಯೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೌನ್ಸಿಲ್ ಕಾರ್ಯನಿರತವಾಗಿದೆ. ರಜತಮಹೋತ್ಸವ ಸನಿಹದಲ್ಲಿರುವ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಈ ಚಟುವಟಿಕೆಗಳು ತಾಂತ್ರಿಕ, ಸಂಶೋಧನಾತ್ಮಕ, ಉದ್ಯಮಿಗಳನ್ನು ಆಕರ್ಷಿಸಿ ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ನಾವೀನ್ಯತೆಯ ಕೇಂದ್ರ ಬಿಂದುವನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ.

LEAVE A REPLY

Please enter your comment!
Please enter your name here