ಮಂಗಳೂರು : ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ಆದರೆ ಮಂಗಳೂರಿನಲ್ಲಿ ಜಾತ್ರೆ ವ್ಯಾಪಾರವನ್ನೇ ನಂಬಿಕೊಂಡು ಬದುಕುವ ವ್ಯಾಪಾರಿಗಳಿಗೆ ವ್ಯಾಪಾರದ ಹಕ್ಕನ್ನು ನಿರಾಕರಿಸಲಾಗಿದೆ. ಬಿಜೆಪಿ ಸರಕಾರದ ಕಾಲಕ್ಕಿಂತಲೂ ಕಟುವಾದ ಪರಿಸ್ಥಿತಿ ನಿರ್ಮಾಣ ಆಗಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಅನೇಕ ಗ್ಯಾರೆಂಟಿಗಳನ್ನು ಕೊಟ್ಟಿದೆ ಅದರೊಂದಿಗೆ ಜಾತ್ರೆ ವ್ಯಾಪಾರಿಗಳಿಗೆ ಬದುಕುವ ಗ್ಯಾರೆಂಟಿ ಕೊಡಿ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಝ್ ಆಗ್ರಹಿಸಿದ್ದಾರೆ. ಇಂದು ನಗರದ ಪುರಭವನದ ಬಳಿ ನಿರ್ದಿಷ್ಟ ಧರ್ಮದ ಜಾತ್ರೆ ವ್ಯಾಪಾರಿಗಳಿಗೆ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಅವಕಾಶ ನಿರಾಕರಣೆಯ ವಿರುದ್ಧ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಕಾಯಿದೆಯನ್ನು ಗೌರವಿಸುತ್ತೇವೆ ಅದೇ ಸಮಯದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯಿದೆ ಮತ್ತು ಬೀದಿಬದಿ ವ್ಯಾಪಾರದ ಕಾಯಿದೆಯ ಉಲ್ಲಂಘನೆ ಮಾಡುವುದನ್ನು ವಿರೋಧಿಸುತ್ತೇವೆ. ಧರ್ಮದ ಹೆಸರಲ್ಲಿ ದ್ವೇಷ ಹರಡಲು ಬಿಡುವುದಿಲ್ಲ ಎಂದರು.
ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಗೌರವಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ ದಸರಾ ಎಲ್ಲರೂ ಸೇರಿ ಮಾಡುವಂಥ ನಾಡ ಹಬ್ಬ. ಧರ್ಮದ ಹೆಸರಲ್ಲಿ ಬಡವರ ಹೊಟ್ಟೆಗೆ ಹೊಡೆಯುವುದು ಅಧರ್ಮ. ಸಂಘ ಪರಿವಾರ ಪ್ರಾಯೋಜಿತ ಕೆಲವು ಹಿತಾಸಕ್ತಿಗಳು ಬಡವರ ಮಧ್ಯೆ ದ್ವೇಷ ಹರಡುತ್ತಿದೆ ಶ್ರೀಮಂತರ ಜೊತೆಯಲ್ಲಿ ನೇರ ವ್ಯವಹಾರ ಮಾಡುತ್ತಿದೆ. ಸಂಘ ಪರಿವಾರದ ಕಿಡಿಗೇಡಿ ಕೃತ್ಯಗಳನ್ನು ಕಾಂಗ್ರೆಸ್ ಸರಕಾರ ಮೂಕಪ್ರೇಕ್ಷಕರತೆ ನೋಡುತ್ತಿದೆ. ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆನ್ನಲು ಹಿಂದೂ ಸನಾತನ ಜಾತ್ರೆ ವ್ಯಾಪಾರಿ ಸಂಘಕ್ಕೆ ಏನು ಸಂವಿಧಾನಿಕ ಹಕ್ಕಿದೆ ಎಂದು ಪ್ರಶ್ನಿಸಿದ ಅವರು ಮುಸ್ಲಿಂ ವ್ಯಾಪಾರಿಗಳಿಗೂ ಜಾತ್ರೆ ವ್ಯಾಪಾರ ನಡೆಸಲು ಹಕ್ಕಿದೆ ಎಂದು ಹೇಳಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಸಾಮರಸ್ಯ ಸಂಘಟನೆಯ ಮಂಜುಳಾ ನಾಯಕ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಮೊಹಮ್ಮದ್ ಮುಸ್ತಫಾ, ಹರೀಶ್ ಪೂಜಾರಿ ಬೋಂದೆಲ್, ಪ್ರವೀಣ್ ಕುಮಾರ್ ಕದ್ರಿ, ಶಿವಪ್ಪ, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿ, ಆಸೀಫ್ ಬಾವ ಉರುಮನೆ, ರಫೀಕ್ ಹರೇಕಳ, ಅಸುಂತ ಡಿಸೋಜಾ, ರಹಿಮಾನ್ ಅಡ್ಯಾರ್, ರಿಯಾಜ್ ಎಲ್ಯರ್ ಪದವು ಮುಂತಾದವರು ಉಪಸ್ಥಿತರಿದ್ದರು.
ಇನ್ನೊಂದೆಡೆ ಮುಸ್ಲಿಂ ವ್ಯಾಪಾರಿಗಳಿಗೆ ಅನ್ಯಾಯ ಆಗಿರುವ ಬಗ್ಗೆ ಅಪರ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಹಿಂದೂ ಸನಾತನ ಜಾತ್ರೆ ವ್ಯಾಪಾರಸ್ಥರ ಅರ್ಜಿ ಆಧಾರದಲ್ಲಿ ಸಂಘರ್ಷ ನಡೆಯಬಹುದು ಎಂದು ಮುಸ್ಲಿಂ ವ್ಯಾಪಾರಿಗಳಿಗೆ ತಿಳಿಸಿರುವುದನ್ನು ದೇವಸ್ಥಾನದ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಮುಸ್ಲಿಂ ವ್ಯಾಪಾರಿಗಳನ್ನು ಭಯ ಹುಟ್ಟಿಸಿ ವಾಪಸ್ ಕಳುಹಿಸಿರುವ ದೇವಸ್ಥಾನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಅಪರ ಜಿಲ್ಲಾಧಿಕಾರಿಗಳು ಭದ್ರತೆ ಕೊಟ್ಟು ಎಲ್ಲರನ್ನು ಒಳಗೊಳ್ಳುವಂತ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ದೇವಸ್ಥಾನದ ಜಾಗವನ್ನು ಹೊರತುಪಡಿಸಿದ ನಗರಪಾಲಿಕೆ ಜಾಗದಲ್ಲಿ ತುರ್ತು ಟೆಂಡರು ಕರೆದು ನಾಳೆ ಬೆಳಿಗ್ಗೆಯೇ ಬಹಿರಂಗ ಹರಾಜು ಮಾಡಿ ಎಲ್ಲರಿಗೂ ವ್ಯಾಪಾರ ಮಾಡುವಂತಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಾ ನಗರಪಾಲಿಕೆಗೆ ಜಿಲ್ಲಾಡಳಿತ ಆದೇಶ ನೀಡಿದೆ. ಸಭೆಯಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತೆ ರೇಖಾ ಶೆಟ್ಟಿ, ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್, ಮಂಗಳಾದೇವಿ ದೇವಸ್ಥಾನದ ಪ್ರತಿನಿಧಿಗಳು, ಬೀದಿಬದಿ ಮತ್ತು ಜಾತ್ರೆ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಬಿ.ಕೆ ಇಮ್ತಿಯಾಝ್, ಸುನಿಲ್ ಕುಮಾರ್ ಬಜಾಲ್, ಹರೀಶ್ ಪೂಜಾರಿ, ಪ್ರವೀಣ್ ಕುಮಾರ್ ಕದ್ರಿ, ರಿಯಾಜ್, ಶಾಫಿ ಬೆಂಗ್ರೆ, ಆಸೀಫ್ ಬಾವ ಉಪಸ್ಥಿತರಿದ್ದರು.