ಮಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಮಾದರಿಯ ವಾತಾವರಣ ಉಂಟಾಗಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ.
ಲಕ್ಷದ್ವೀಪ, ನೈರುತ್ಯ ಅರಬ್ಬೀ ಸಮುದ್ರ ಮತ್ತು ಕೇರಳ ಕರಾವಳಿಯ ಮಧ್ಯೆ ಸಮುದ್ರ ಮಟ್ಟದಿಂದ 3 ಕಿಮೀ ಎತ್ತರದಲ್ಲಿ ಚಂಡಮಾರುತ ಮಾದರಿ ವರ್ತುಲ ಉಂಟಾಗಿದ್ದು, ಇದರಿಂದಾಗಿ ಅರಬ್ಬೀ ಸಮುದ್ರ ಮತ್ತು ಕರ್ನಾಟಕ, ಕೇರಳ ಕರಾವಳಿಯಲ್ಲಿ ಅ.17ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಉತ್ತರ ಭಾಗದತ್ತ ಚಲಿಸಲಿದೆ ಎಂದು ಮಂಗಳೂರಿನ ಬಂದರು ಪ್ರಾಧಿಕಾರ ಕೇಂದ್ರ ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಕರಾವಳಿಯಲ್ಲಿ ಮೀನುಗಾರಿಕೆ ನಡೆಸದಂತೆ ಮುಂಜಾಗ್ರತೆ ವಹಿಸಬೇಕು. ಎನ್ಎಂಪಿಎಂ ಬಂದರಿನಲ್ಲಿ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕದ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ತಿಳಿಸಲಾಗಿದೆ.