ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಗೆ ಪೂಜೆ – ಇಲ್ಲಿದೆ ಮಾಹಿತಿ

ಮಂಗಳೂರು/ಪುತ್ತೂರು: ನವರಾತ್ರಿಯ ನಾಲ್ಕನೇ ದಿನದಂದು ಮಾತೆ ಕೂಷ್ಮಾಂಡಳನ್ನು ಪೂಜಿಸಲಾಗುತ್ತದೆ. ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಶ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಸಂಸ್ಕೃತದಲ್ಲಿ ಕೂಷ್ಮಾಂಡವೆಂದರೆ ಬೂದು ಕುಂಬಳಕಾಯಿ ಎಂದರ್ಥ. ಇದಕ್ಕೆ ಬ್ರಹ್ಮಾಂಡವೆಂದೂ ಅರ್ಥವಿದೆ. ತಾಯಿ ಕೂಷ್ಮಾಂಡಳು ತನ್ನ ನಗುವಿನಿಂದ ಅಂಧಕಾರವನ್ನು ತೊಡೆದು ಹಾಕುವ ಶಕ್ತಿದೇವತೆಯಾಗಿದ್ದು ಎಂಟು ಕೈಗಳಲ್ಲಿ ಕಮಂಡಲ, ಧನಸ್ಸು, ಜಪಮಾಲೆ, ಕಮಲ, ಗದೆ, ಅಮೃತ ಕಲಶ, ಚಕ್ರ, ಬಾಣವನ್ನು ಹೊಂದಿದ್ದು ಅಷ್ಟಭುಜ ದೇವಿಯೆಂದೂ ಕರೆಯುತ್ತಾರೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ.

ಕೂಷ್ಮಾಂಡ ದೇವಿಯ ಕಥೆ
ಸೃಷ್ಟಿಯ ಅಸ್ಥತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ಈಶತ್‌ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿಸ್ವರೂಪ ಶಕ್ತಿಯಾಗಿದ್ದಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಈಕೆಯನ್ನು ಪೂಜಿಸುವುದರಿಂದ ಸೂರ್ಯನಿಂದಾಗುವ ಕೆಡುಕು ಮತ್ತು ಎಲ್ಲಾ ರೀತಿಯ ಸಂಕಷ್ಟ ನಿವಾರಣೆಯಾಗುವುದು. ಉತ್ತಮ ಆರೋಗ್ಯ ಸಂಪತ್ತು ಪ್ರಾಪ್ತಿಯಾಗುತ್ತದೆ. ಸಿದ್ಧಿ ಮತ್ತು ನಿಧಿ ತಾಯಿಯ ಜಪಮಾಲೆಯಲ್ಲಿದೆ ಎಂದು ಗ್ರಂಥಗಳು ಹೇಳುತ್ತದೆ.

ಕೂಷ್ಮಾಂಡ ದೇವಿಯ ಪೂಜಾ ವಿಧಿ
ಕೂಷ್ಮಾಂಡ ದೇವಿಯನ್ನು ಪೂಜಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ದೇವಿಯನ್ನು ಅರ್ಚಿಸಿ ಷೋಡಶೋಪಚಾರ 16 ವಿಧದ ಪೂಜೆ ಮಾಡಿ ಆರತಿ ಬೆಳಗುವುದು. ತಾಯಿ ಕೂಷ್ಮಾಂಡಳು ಮಾಲ್ಪು ವಾವನ್ನು ಹೆಚ್ಚು ಇಷ್ಟಪಡುತ್ತಾಳೆ ಹಾಗಾಗಿ  ಪೂಜಿಸುವಾಗ ಮಾಲ್ಪುವಾವನ್ನು ನೈವೇದ್ಯವಾಗಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ ತಾಯಿ ಕೂಷ್ಮಾಂಡಳು ಬೇಗನೆ ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರ ಮೇಲೆ ತನ್ನ ಅನುಗ್ರಹವನ್ನು ಧಾರೆಯೆರೆಯುತ್ತಾಳೆ. ಕೂಷ್ಮಾಂಡ ದೇವಿಯನ್ನು ಪೂಜಿಸುವಾಗ ಈ ಮಂತ್ರವನ್ನು ತಪ್ಪದೇ ಪಠಿಸಬೇಕು.

ಕೂಷ್ಮಾಂಡ ದೇವಿ ಮಂತ್ರ
ಓಂ ದೇವಿ ಕೂಷ್ಮಾಂಡೈ ನಮಃ
ಓಂ ದೇವಿ ಕೂಷ್ಮಾಂಡದಾಯ್ಯೈ ನಮಃ
ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ
ದಾಧನ ಹಸ್ತಪದ್ಮಾಭಯಂ ಕೂಷ್ಮಾಂಡ ಶುಭದಾಸ್ತು ಮೇ
ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡ ರೂಪೇನ್‌ ಸಂಸ್ಥಿತಾ l
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ll

LEAVE A REPLY

Please enter your comment!
Please enter your name here