ವಾಮಂಜೂರು ಪ್ರದೇಶಕ್ಕೆ ಮನಪಾ ನಿಯೋಗ ಭೇಟಿ – ವಿವಾದಿತ ಅಣಬೆ ಫ್ಯಾಕ್ಟರಿ ಪರಿಶೀಲಿಸಿದ ನಿಯೋಗ-ಸ್ಥಳೀಯರ ಮನವಿಗೆ ಕಿವಿಯಾದ ಮೇಯರ್ 

ಮಂಗಳೂರು: ಹಲವು ಸಮಯದಿಂದ ವಿವಾದದ ಕೇಂದ್ರ ಬಿಂದುವಾಗಿರುವ ಮಂಗಳೂರು ವಾಮಂಜೂರಿನ ವೈಟ್ ಗ್ರೊ ಅಣಬೆ ಫ್ಯಾಕ್ಟರಿಗೆ ಅಧಿಕಾರಿಗಳ ಮತ್ತು ಪಾಲಿಕೆ ಸದಸ್ಯರುಗಳನ್ನೊಳಗೊಂಡ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ನೇತ್ರತ್ವದ ನಿಯೋಗ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿ, ಅಣಬೆ ಫ್ಯಾಕ್ಟರಿಯ ಪರಿಶೀಲನೆ ನಡೆಸಿದರು.

ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಪಾಲಿಕೆ ಆಯುಕ್ತರು, ಮುಖ್ಯ ಸಚೇತಕರು, ಪ್ರತಿಪಕ್ಷ ನಾಯಕರು, ಸ್ಥಳೀಯ ಪಾಲಿಕೆ ಸದಸ್ಯರು, ಆರೋಗ್ಯಾಧಿಕಾರಿಗಳು, ಪರಿಸರ ಮಾಲಿನ್ಯ ಅಧಿಕಾರಿಗಳು, ಎನ್‌ಐಟಿಕೆಯ ತಜ್ಞರು ನಿಯೋಗದಲ್ಲಿದ್ದರು. ಅಣಬೆ ಫ್ಯಾಕ್ಟರಿಯಿಂದ ಹೊರ ಬರುವ ತ್ಯಾಜ್ಯದಿಂದ ನೇರ ಸಮಸ್ಯೆಗಳನ್ನು ಎದುರಿಸುತ್ತಿರುವ ಆಶ್ರಯ ಕಾಲನಿಗೆ ಭೇಟಿ ನೀಡಿದ ನಿಯೋಗವನ್ನು ಸುತ್ತುವರಿದ ನೂರಾರು ಸ್ಥಳೀಯರು ತಾವು ಅನುಭವಿಸುತ್ತಿರುವ ನರಕ ಯಾತನೆ, ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರು ಅನುಭವಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲರ ಅಹವಾಲುಗಳನ್ನು ಸಮಾಧಾನದಿಂದಲೇ ಆಲಿಸಿದ ಮೇಯರ್ ಎಲ್ಲರ ಒಮ್ಮತದ ಪರಿಹಾರ ಸೂತ್ರದ ಭರವಸೆ ನೀಡಿದರು. ಅಣಬೆ ಫ್ಯಾಕ್ಟರಿಗೂ ಭೇಟಿ ನೀಡಿದ ಸಮಿತಿ ಅಲ್ಲಿನ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಘಟಕದ ಕಾರ್ಯ ವಿಧಾನವನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಫ್ಯಾಕ್ಟರಿ ಆಡಳಿತ ಸಿಬಂದಿ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಕುರಿತು ಸುದ್ದಿಗಾರೆರೊಂದಿಗೆ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ, ಎಲ್ಲವನ್ನೂ ಪರೀಶೀಲಿಸಲಾಗಿದೆ, ಜನರ ಅಹವಾಲು, ನೋವುಗಳನ್ನು ಆಲಿಸಿದ್ದೇವೆ. ನಿಯೋಜಿತ ಸಮಿತಿ ಮತ್ತು ಫ್ಯಾಕ್ಟರಿ ಆಡಳಿತ ನಡೆಸುವವರೊಂದಿಗೆ ತುರ್ತು ಸಭೆ ನಡೆಸಿ ಆ ಸಭೆಯಲ್ಲಿ ಪ್ರಸ್ತುತ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡಸುತ್ತೇವೆ. ಅದರಲ್ಲಿ ಕೈಗೊಳ್ಳಬಹುದಾದ ಪರ್ಯಾಯ ಮಾರ್ಗಗಳು ಅಥವಾ ಅಣಬೆ ಘಟಕದ ಸ್ಥಳಾಂತರ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು. ಜಿಲ್ಲಾಧಿಕಾರಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಅಣಬೆ ಫ್ಯಾಕ್ಟರಿಗೆ ಪಾಲಿಕೆ ಅನುಮತಿ ನೀಡಿದೆ ಆದರೆ ಈ ಅನುಮತಿ ಶರ್ತಗಳನ್ನು ಉಲ್ಲಂಘಿಸಿದಲ್ಲಿ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here