ಮಂಗಳೂರು(ಹೊಸದಿಲ್ಲಿ): ವಿಶ್ವದ ಮೊದಲ ಪುರುಷ ಗರ್ಭನಿರೋಧಕ ಚುಚ್ಚುಮದ್ದು ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ರಕಟಿಸಿದೆ.
ವಿಶ್ವದಲ್ಲಿ ಮೊದಲ ಬಾರಿಗೆ ಪುರುಷರಿಗಾಗಿ ಈ ಗರ್ಭನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಲಾಗಿದೆ. ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲ ಎಂದು ಅದು ಬಹಿರಂಗಪಡಿಸಿದೆ. 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ, 25ರಿಂದ 40 ವರ್ಷ ವಯಸ್ಸಿನ 303 ಪುರುಷರ ಮೇಲೆ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಅಧ್ಯಯನದ ವಿವರಗಳನ್ನು ಇತ್ತೀಚೆಗೆ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಆಂಡ್ರೊಲಜಿಯಲ್ಲಿ ಪ್ರಕಟಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
ಸಾಮಾನ್ಯವಾಗಿ, ಪುರುಷರು ಸಂತಾನಹರಣವನ್ನು ಅನುಸರಿಸುತ್ತಾರೆ ಅಥವಾ ಮಹಿಳೆಯರು ಗರ್ಭಿಣಿಯಾಗುವುದನ್ನು ತಡೆಯಲು ಕಾಂಡೋಮ್‌ಗಳನ್ನು ಬಳಸುತ್ತಾರೆ. ಆದರೆ ಈಗ ಪುರುಷರಿಗೆ ಇಂಜೆಕ್ಷನ್ ನೀಡುವ ಮೂಲಕ ಮಹಿಳೆಯರು ಗರ್ಭಿಣಿಯಾಗುವುದನ್ನು ತಡೆಯಲು ಐಸಿಎಂಆರ್ ಈ ಇಂಜೆಕ್ಷನ್ ತಯಾರಿಸಿದೆ. ರಿವರ್ಸಿಬಲ್ ಇನ್ಹಿಬಿಷನ್ ಆಫ್ ಸ್ಪರ್ಮ್ ಅಂಡರ್ ಗೈಡೆನ್ಸ್ ಎಂಬ ಈ ಇಂಜೆಕ್ಷನ್ ಅನ್ನು 60 ಮಿಲಿಗ್ರಾಂಗಳಷ್ಟು ಪುರುಷರಿಗೆ ನೀಡಿದರೆ, ವೀರ್ಯದಲ್ಲಿನ ವೀರ್ಯಾಣುಗಳ ಸಂಖ್ಯೆಯು 97.3% ರಷ್ಟು ಕಡಿಮೆಯಾಗುತ್ತದೆ ಎಂದು ಐಸಿಎಂಆರ್ ವಿಜ್ಞಾನಿಗಳು ತಿಳಿಸಿದ್ದಾರೆ. ಪ್ರಸ್ತುತ ಪುರುಷರು ಮತ್ತು ಮಹಿಳೆಯರು ಬಳಸುವ ಗರ್ಭನಿರೋಧಕ ವಿಧಾನಗಳಿಗಿಂತ ಈ ವಿಧಾನವು ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿದೆ.