ಮಂಗಳೂರು(ಬಹರೈನ್): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಇಸ್ರೇಲ್ ಪರ ಸ್ಟೇಟಸ್ ಪೋಸ್ಟ್ ಮಾಡಿದ್ದ ಬಹರೈನ್ ನಲ್ಲಿರುವ ಮಂಗಳೂರು ಮೂಲದ ವೈದ್ಯರೊಬ್ಬರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ.
ಮಂಗಳೂರು ಮೂಲದ ವೈದ್ಯ ಡಾ.ಸುನೀಲ್ ಜೆ. ರಾವ್ ಇಸ್ರೇಲ್ನಲ್ಲಿನ ಯುದ್ಧ ಪರಿಸ್ಥಿತಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಸ್ಟೇಟಸ್ ಹಾಕಿದ್ದು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಟೇಟಸ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದರು. ಆದರೂ ಅವರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಡಾ. ಸುನೀಲ್ ರಾವ್ ದಿ ರಾಯಲ್ ಬಹರೈನ್ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದು, ಪ್ಯಾಲೆಸ್ತೀನಿಯರ ವಿರುದ್ಧ ಎಕ್ಸ್ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿದ್ದರು. ಡಾ.ಸುನಿಲ್ ರಾವ್ ಸ್ಟೇಟಸ್ ಅವರ ವೈಯಕ್ತಿಕ ಅಭಿಪ್ರಾಯ. ಅದಕ್ಕೂ ಆಸ್ಪತ್ರೆಗೂ ಸಂಬಂಧವಿಲ್ಲ. ಅದಾಗ್ಯೂ ಅವರು ಸಮಾಜಕ್ಕೆ ಅಪರಾಧ ಅನಿಸುವಂಥ ಸ್ಟೇಟಸ್ ಹಾಕಿರುವುದರಿಂದ ತಕ್ಷಣವೇ ಜಾರಿಗೆ ಬರುವಂತೆ ಅವರನ್ನು ಉದ್ಯೋಗದಿಂದ ತೆಗೆಯಲಾಗಿದೆ ಎಂದು ದಿ ರಾಯಲ್ ಬಹರೈನ್ ಆಸ್ಪತ್ರೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಕ್ಷಮೆ ಕೇಳಿದ್ದ ಡಾ.ಸುನಿಲ್ ರಾವ್, ನನ್ನ ಮಾತು ಮತ್ತು ಕಾರ್ಯಗಳಿಗಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ನಾನು ಈ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಗಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಪ್ರಸ್ತುತ ಘಟನೆಯ ಸಂದರ್ಭದಲ್ಲಿ ಇದು ಸಂವೇದನಾರಹಿತವಾಗಿತ್ತು. ವೈದ್ಯನಾಗಿ ಹೇಳುತ್ತೇನೆ, ಎಲ್ಲ ಜೀವಗಳು ಮುಖ್ಯ ಎಂಬುದಾಗಿ ಹೇಳಿದ್ದರು. ಕಳೆದ ಹತ್ತು ವರ್ಷಗಳಿಂದ ಇಲ್ಲಿದ್ದು, ಈ ದೇಶ, ದೇಶದ ಜನರು ಮತ್ತು ಧರ್ಮವನ್ನು ಗೌರವಿಸುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೂ ಉದ್ಯೋಗವನ್ನು ಅವರು ಕಳೆದುಕೊಳ್ಳುವಂತಾಗಿದೆ.