ಮಂಗಳೂರು (ಬೆಂಗಳೂರು): ಶಿವಮೂರ್ತಿ ಎಂಬ ವ್ಯಕ್ತಿಗೆ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತಿಲ ಪರಿವಾರದ ಮುಖಂಡ ರಾಜಶೇಖರ್ ಆಲಿಯಾಸ್ ಶೇಖರ್ ವಿರುದ್ದ ಎಫ್‌ಐಆರ್ ದಾಖಲಾಗಿದ್ದು, ಈತನ ಬಂಧನಕ್ಕೆ ಬೆಂಗಳೂರು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಪುತ್ತೂರಿನ ಬನ್ನೂರಿನಲ್ಲಿರುವ ರಾಜಶೇಖರ್ ಮನೆಗೆ ಬೆಂಗಳೂರು ಪೊಲೀಸರು ಇಂದು ಮುಂಜಾನೆ ದಾಳಿ ನಡೆಸಿದ್ದು, ಮಾಹಿತಿ ತಿಳಿದ ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಬೆಂಗಳೂರು ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಿ. ಶಿವಮೂರ್ತಿ ಎಂಬ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ವಂಚನೆ ಮಾಡಿದ ಬಗ್ಗೆ ವಿಜಯನಗರ ಪೋಲೀಸರಿಗೆ ದೂರು ನೀಡಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಪೋಲೀಸ್ ಮಹಾನಿರ್ದೇಶಕರು ಸೇರಿದಂತೆ ಮುಖ್ಯಮಂತ್ರಿಗಳಿಗೂ ದೂರು ನೀಡಲಾಗಿತ್ತು.
ಸಿದ್ದಲಿಂಗಪ್ಪ ಎಂಬ ವ್ಯಕ್ತಿಗೆ ವಿಜಯನಗರ ಜಿಲ್ಲೆಯ ಹರಿಗಬೊಮ್ಮನ ಹಳ್ಳಿಯ ಎಂಬ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಎಂ ಎಲ್ ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಪುತ್ತೂರು ಮೂಲದ ರಾಜ್ ಶೇಖರ್ ತನ್ನ ಖಾತೆಗೆ ಎರಡು ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡು, ಒಟ್ಟು 2.55 ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ಮತ್ತು ಇದೇ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿಸಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಜಯನಗರ ಉಪವಿಭಾಗದ ಕೊತ್ತೂರು ಪೋಲೀಸ್ ಠಾಣೆಯಲ್ಲಿ ಐಪಿಸಿ 1860 (U/s, 420, 506,34) ಅಡಿ ಅ.19ರಂದು ಪ್ರಕರಣ ದಾಖಲಾಗಿದೆ. ಅ.21ರಂದು ಮುಖ್ಯಮಂತ್ರಿಗಳಿಗೂ ದೂರು ನೀಡಲಾಗಿದೆ. ದೂರು ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿ.ಸಿ.ಬಿ. ತನಿಖೆ ನಡೆಸಿ, ತಪ್ಪತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ವಂಚನೆ ಆರೋಪಿ ರಾಜಶೇಖರ ಪುತ್ತೂರಿನ ಪುತ್ತಿಲ ಪರಿವಾರದ ಮುಖಂಡರು ಎನ್ನಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಕೆಲವೊಂದು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು.