ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಇಲಾಖೆ ದಾಳಿ ಸಲಕರಣೆ ವಶಕ್ಕೆ – ಅಕ್ರಮ ಗಣಿಕೋರರ ಬೆನ್ನಿಗೆ ನಿಂತ ಗ್ರಾಮ ಪಂಚಾಯತ್ ವಿರುದ್ಧ ಗ್ರಾಮಸ್ಥರ ಸಮರ

ಮಂಗಳೂರು: ಅಕ್ರಮ ಗಣಿಗಾರಿಕೆ ಮಾಡುವವರ ಬೆನ್ನಿಗೆ ನಿಂತಿರುವ ನೀರುಮಾರ್ಗ ಗ್ರಾಮ ಪಂಚಾಯತ್‌ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಭೂ ಮತ್ತು ಗಣಿ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದು, ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿದ ದಕ್ಷಿಣ ಕನ್ನಡ ಭೂ ಗಣಿ ವಿಜ್ಞಾನಿ, ಮತ್ತು ಕಿರಿಯ ಅಭಿಯಂತರರು ಗಣಿಗಾರಿಕೆಗೆ ಬಳಸಿದ್ದ ಸಲಕರಣೆ, ಯಂತ್ರ, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಉಳ್ಳಾಲ ಮೂಲದ ವ್ಯಕ್ತಿಯೊಬ್ಬರು ಅಕ್ರಮ ಗಣಿಗಾರಿಕೆ ಮಾಡುವ ಮೂಲಕ ಕಲ್ಲಿನ ಕೋರೆಯಲ್ಲಿ ಸ್ಪೋಟಕಗಳ ಬಳಕೆ ಮಾಡಿ ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದ್ದಾರೆ. ಕೆಲ ತಿಂಗಳಿನಿಂದ ಅವ್ಯಾಹತವಾಗಿ ನಡೆಯುವ ಸ್ಪೋಟಕದಿಂದ ಸ್ಥಳೀಯ ಗ್ರಾಮದ ಇಪ್ಪತ್ತಕ್ಕೂ ಅಧಿಕ ಮನೆಗಳು, ಮಸೀದಿ ಗೋಡೆ, ಗಾಜು ಬಿರುಕು ಬಿಟ್ಟು ಕುಸಿದು ಬೀಳುವ ಹಂತಕ್ಕೆ ತಲುಪಿದೆ‌. ಈ ಬಗ್ಗೆ ಹಲವಾರು ಬಾರಿ‌ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮ ಗಣಿಕೋರರ ಬೆನ್ನಿಗೆ ನಿಂತ ನೀರುಮಾರ್ಗ ಗ್ರಾಮ ಪಂಚಾಯತ್ ವಿರುದ್ದ ದ.ಕ ಜಿಲ್ಲಾ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.

2017 ರಲ್ಲಿ ಒಂದು ವರ್ಷದ ಅವಧಿಗೆ ಗಣಿಗಾರಿಕೆಗೆ ಅವಕಾಶ ನೀಡಿದ್ದು ಬಳಿಕ ಅನುಮತಿ ರದ್ದುಪಡಿಸಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಿರಂತರ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಪಂಚಾಯತ್ ಅಕ್ರಮ ಗಣಿಗಾರಿಕೆಯನ್ನು ತಡೆದಿಲ್ಲ. ಸ್ವತಃ ಪಂಚಾಯತ್ ಅಧ್ಯಕ್ಷರ ಗ್ರಾಮದಲ್ಲೇ ಈ ರೀತಿಯ ಅಕ್ರಮ ಗಣಿಗಾರಿಕೆಯ ಮೂಲಕ ಮನೆ ಹಾನಿಯಾಗಿರುವುದು ವಿಪರ್ಯಾಸ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸುತ್ತಾರೆ.

ಪಂಚಾಯತ್‌ ಮೇಲಿದ್ದ ನಿರೀಕ್ಷೆಗಳು ಸುಳ್ಳಾದಾಗ ಗ್ರಾಮಸ್ಥರು ದ.ಕ ಜಿಲ್ಲಾ ಭೂ ಮತ್ತು ಗಣಿ ಇಲಾಖೆಗೆ ಭೇಟಿ ನೀಡಿ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ದಾಳಿ ನಡೆಸಿ ಗಣಿಗಾರಿಕೆಗೆ ಬಳಸಿದ್ದ ಸಲಕರಣೆಗಳನ್ನು ವಶಕ್ಕೆ ಪಡೆಯುವ ಮೂಲಕ ಗ್ರಾಮದ ಜನರಿಗೆ ಅಕ್ರಮದ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಗಣಿ ಇಲಾಖೆ ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತದೋ ಕಾದುನೋಡಬೇಕು.

LEAVE A REPLY

Please enter your comment!
Please enter your name here