ಮಂಗಳೂರು: ಮುಂದಿನ 2 ವಾರಗಳಲ್ಲಿ ಮರಳಿನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಕಾರ್ಮಿಕರನ್ನೊಳಗೊಂಡು ಪ್ರತಿಭಟನೆಯನ್ನು ನಡೆಸುವುದಾಗಿ ಜಿಲ್ಲಾಡಳಿತಕ್ಕೆ ದ.ಕ ಜಿಲ್ಲಾ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಶೀಯೆಶನ್ ಎಚ್ಚರಿಕೆಯನ್ನು ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿವಿಲ್ ಕಾಂಟ್ರಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಮಹಾಬಲ ಎಂ ಕೊಟ್ಟಾರಿ, ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣದ ಉಪಯೋಗಗಕ್ಕೆ ಸಿಗುತ್ತಿದ್ದ ನೈಸರ್ಗಿಕ ಮರಳು ಇತ್ತೀಚಿನ ವರ್ಷಗಳಲ್ಲಿ ಸಮರ್ಪಕವಾಗಿ ದೊರಕದೆ ಗುತ್ತಿಗೆದಾರರು ಮತ್ತು ಸಾರ್ವಜನಿಕರು ಕಾಳಸಂತೆಯಲ್ಲಿ ದುಬಾರಿ ಹಣ ನೀಡಿ ಮರಳು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮತ್ತು ಗಣಿ ಇಲಾಖೆಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕಾನೂನು ರೀತಿಯಲ್ಲಿ ದೊರಕದ ಮರಳು ಕಾಳಸಂತೆಯಲ್ಲಿ ಮಾರಾಟವಾಗುವುದರಿಂದ ಸರಕಾರಕ್ಕೂ ರಾಯಧನ ನಷ್ಟವಾಗುತ್ತಿದೆ. ಆದ್ದರಿಂದ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಕಾಮಗಾರಿಗಳಿಗೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಸರಾಗವಾಗಿ ಆಗುವ ಹಾಗೆ ನೋಡಿಕೊಂಡು ಉದ್ಯಮವನ್ನು ಉಳಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ಕೆನರಾ ಬಿಲ್ಡರ್ಸ್ ಅಸೋಸಿಯೇಶನ್, ಕ್ರೆಡಾಯಿ ಬಿಲ್ಡರ್ಸ್ ಅಸೋಸಿಯೇಶನ್, ಸಿಮೆಂಟ್, ಸ್ಟೀಲ್ ಡೀಲರ್ಸ್ ಅಸೋಸಿಯೇಶನ್, ಪೈಂಟ್, ಹಾರ್ಡ್ ವೇರ್ ಡೀಲರ್ಸ್ ಅಸೋಸಿಯೇಶನ್, ಪಿಡಬ್ಲ್ಯೂಡಿ ಕಾಂಟ್ರಕ್ಟರ್ ಅಸೋಸಿಯೇಶನ್, ಮಂಗಳೂರು ಮಹಾನಗರ ಪಾಲಿಕೆ ಕಾಂಟ್ರಕ್ಟರ್ ಅಸೋಸಿಯೇಶನ್ ಇದಕ್ಕೆ ಬೆಂಬಲ ಸೂಚಿಸಿದ್ದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.