ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ್’ ಬಳಕೆ – ಎನ್‌ಸಿಇಆರ್‌ಟಿ ಗೆ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿ ಅನುಮೋದನೆ

ಮಂಗಳೂರು(ಬೆಂಗಳೂರು): ಜಿ20 ಶೃಂಗಸಭೆಯ ವೇಳೆ ಚರ್ಚೆಗೊಳಗಾಗಿದ್ದ ದೇಶದ ಹೆಸರು ಬದಲಾವಣೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ದೇಶದ ಹೆಸರನ್ನು ‘ಇಂಡಿಯಾ’ ಅಥವಾ ‘ಭಾರತ್’ ಎಂದು ಬಳಸುವ ಚರ್ಚೆಗಳ ನಡುವೆಯೇ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್, ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮಗಳಲ್ಲಿ ಇಂಡಿಯಾ ಬದಲು ಭಾರತ್ ಪದ ಬಳಸುವ ನಿರ್ಧಾರಕ್ಕೆ ಉನ್ನತ ಮಟ್ಟದ ಸಮಿತಿಯು ಅನುಮೋದನೆ ನೀಡಿದೆ.

ಎನ್‌ಸಿಇಆರ್‌ಟಿ ರಚಿಸಿರುವ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಯು, ಮುಂದಿನ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಹೆಸರನ್ನು ಇನ್ನು ಮುಂದೆ ‘ಭಾರತ್’ ಎಂದು ಬದಲಿಸಲು ಮತ್ತು ಪ್ರಾಚೀನ ಇತಿಹಾಸದ ಬದಲಿಗೆ ‘ಶಾಸ್ತ್ರೀಯ ಇತಿಹಾಸ ಪರಿಚಯಿಸಲು ಅವಿರೋಧವಾಗಿ ಶಿಫಾರಸು ಮಾಡಿದೆ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಬುಧವಾರ ಹೇಳಿಕೆ ನೀಡಿದ್ದಾರೆ. ಇಂಡಿಯಾ ಎಂಬ ಪದವನ್ನು ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯ ನಂತರ ಮತ್ತು 1757ರಲ್ಲಿ ಪ್ಲಾಸಿ ಯುದ್ಧದ ನಂತರ ಮಾತ್ರ ಬಳಸಲಾರಂಭಿಸಿತು. ಆದ್ದರಿಂದ, ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿ ಭಾರತ್ ಎಂಬ ಹೆಸರನ್ನು ಬಳಸಬೇಕೆಂದು ಸಮಿತಿಯು ಶಿಫಾರಸು ಮಾಡಿದೆ ಎಂದು ಐಸಾಕ್ ಹೇಳಿಕೆ ನೀಡಿದ್ದಾರೆ. ದೇಶದ ಹೆಸರನ್ನು ‘ಭಾರತ’ ಎಂದು ಅಧಿಕೃತಗೊಳಿಸಿ, ಸಂವಿಧಾನದಿಂದ ‘ಇಂಡಿಯಾ’ ಪದವನ್ನು ಕೈಬಿಡುವ ಯಾವುದೇ ಉದ್ದೇಶವಿಲ್ಲ. ಈ ಕುರಿತು ಬಂದ ವರದಿಗಳು ಕೇವಲ ಊಹಾಪೋಹವಷ್ಟೇ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸ್ಪಷ್ಟಪಡಿಸಿದ್ದರು. ಈಗ ಈ ವಿವಾದ ಎನ್‌ಸಿಇಆರ್‌ಟಿಯ ನಿರ್ಧಾರದಿಂದ ಮತ್ತೊಮ್ಮೆ ಭುಗಿಲೇಳುವ ಲಕ್ಷಣಗಳು ಗೋಚರಿಸುತ್ತಿದೆ.

12ನೇ ತರಗತಿವರೆಗೆ ಎಲ್ಲಾ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಇಂಡಿಯಾವನ್ನು ಭಾರತ ಎಂದು ಕರೆಯಬೇಕೆಂದು ಸಲಹೆ ನೀಡಿರುವುದು ಅತ್ಯಂತ ಅಘಾತಕಾರಿ ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ ಪಿ ಟೀಕಿಸಿದ್ದಾರೆ. ಇನ್ನೊಂದೆಡೆ ಇಂತಹ ಬದಲಾವಣೆಯನ್ನು ರಾಜ್ಯದ ಮೇಲೆ ಹೇರಿದರೆ ಮತ್ತೆ ಇಂಡಿಯಾ ಎಂದೇ ಉಲ್ಲೇಖಿಸಿ ಪಠ್ಯಪುಸ್ತಕಗಳನ್ನು ಪ್ರತ್ಯೇಕವಾಗಿ ಮುದ್ರಿಸಲಾಗುವುದು ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‌ ಕುಟ್ಟಿ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಭಾರತ ಎಂದು ಕರೆದರೆ ತಪ್ಪಲ್ಲ ಎಂದು ಹೇಳುವ ಮೂಲಕ ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

LEAVE A REPLY

Please enter your comment!
Please enter your name here