ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ-ಆರೋಪಿ ರೇವಣ ಸಿದ್ದಪ್ಪ ಬಂಧನ-ಇನ್ನೋರ್ವ ಆರೋಪಿಗಾಗಿ  ಪೊಲೀಸರಿಂದ ಹುಡುಕಾಟ

ಮಂಗಳೂರು(ಕೊಟ್ಟೂರು) : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಿವೃತ್ತ ಎಂಜಿನಿಯರೊಬ್ಬರಿಗೆ  ಹಣ ವಂಚಿಸಿದ ಆರೋಪದ ಮೇಲೆ ಬಿಜೆಪಿಯ ಮಾಜಿ ಮುಖಂಡ ಹಾಗೂ ಹಾಲಿ ಕೆಆರ್‌ಪಿಪಿ ಪಕ್ಷದ ನಾಯಕ, ಪ್ರಕರಣದ ಒಂದನೇ ಆರೋಪಿ ಬೆನಕನ ಹಳ್ಳಿ ರೇವಣ ಸಿದ್ದಪ್ಪ ಎಂಬವರನ್ನು ಕೊಟ್ಟೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕೊಟ್ಟೂರಿಗೆ ಕರೆತಂದಿದ್ದಾರೆ. ಇನ್ನೋರ್ವ ಆರೋಪಿ ಪುತ್ತೂರಿನ ಬನ್ನೂರು ನಿವಾಸಿ ರಾಜಶೇಖರ್‌ಗೆ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಆರೋಪಿ ರೇವಣ ಸಿದ್ದಪ್ಪನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ವಿಚಾರಣೆಗಗಾಗಿ ಪೊಲೀಸ್‌ ವಶಕ್ಕೆ ನೀಡಲಾಗಿದೆ.

ಹಗರಿಬೊಮ್ಮನ ಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆರೋಪಿ ರೇವಣ ಸಿದ್ದಪ್ಪ, ಪುತ್ತೂರು ಮೂಲದ ರಾಜ್‌ ಶೇಖರ್ ಜೊತೆ ಸೇರಿ ಕೊಟ್ಟೂರಿನ ನಿವೃತ್ತ ಎಂಜಿನಿಯರ್ ಶಿವಮೂರ್ತಿ ಅವರಿಂದ 1.95 ಕೋಟಿ ರೂ. ಪಡೆದು ವಂಚಿಸಿರುವುದಾಗಿ ಆರೋಪಿಸಲಾಗಿದೆ. ತಮಗೆ ಟಿಕೆಟ್‌ ಸಿಗದೇ ಇದ್ದಾಗ ಶಿವಮೂರ್ತಿ ಹಣ ಹಿಂದಿರುಗಿಸುವಂತೆ ಕೇಳಿಕೊಂಡಿದ್ದು, ಈ ವೇಳೆ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿತ್ತು.

ಇದಾದ ಬಳಿಕ ಊರಿನ ಮುಖಂಡರು ರಾಜಿ ಸೂತ್ರದ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಲು ಪ್ರಯತ್ನಿಸಿದ್ದು ಆರೋಪಿ ಎರಡು ಚೆಕ್‍ಗಳನ್ನು  ಶಿವಮೂರ್ತಿಯವರಿಗೆ ನೀಡಿದ್ದರು. ಆದರೆ ಚೆಕ್‍ ಬೌನ್ಸ್ ಆದ ಕಾರಣ  ಶಿವಮೂರ್ತಿಯವರು ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ದಿನದಿಂದ ಪ್ರಕರಣದ ಪ್ರಮುಖ ಆರೋಪಿ ರೇವಣ ಸಿದ್ದಪ್ಪ ತಲೆ ಮರೆಸಿಕೊಂಡಿದ್ದ. ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಇದೀಗ ಬಂಧಿಸಿದ್ದಾರೆ. ಆರೋಪಿಯ ಬಂಧನವನ್ನು ವಿಜಯನಗರ ಎಸ್‍ಪಿ ಶ್ರೀಹರಿಬಾಬು ಅವರು ಖಚಿತಪಡಿಸಿದ್ದಾರೆ.

LEAVE A REPLY

Please enter your comment!
Please enter your name here