ವಿರೋಧ ಪಕ್ಷದ ನಾಯಕನ ನೇಮಕಕ್ಕೆ ಹೈಕಮಾಂಡ್‌ ಗೆ ಒತ್ತಡ ಹಾಕುವೆ: ಬಿ.ಎಸ್‌.ಯಡಿಯೂರಪ್ಪ

ಮಂಗಳೂರು (ಬೆಂಗಳೂರು): ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರ ನೇಮಕ ತಡವಾಗಿರುವುದನ್ನು ಒಪ್ಪಿಕೊಂಡಿರುವ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಆದಷ್ಟು ಬೇಗ ನೇಮಕ ಮಾಡುವಂತೆ ವರಿಷ್ಠರ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ಅಧಿವೇಶನದೊಳಗೆ ವಿರೋಧ ಪಕ್ಷದ ನಾಯಕ ಮತ್ತು ಇತರ ಹುದ್ದೆಗಳಿಗೆ ನೇಮಕ ಆಗುತ್ತದೆ. ಆದಷ್ಟು ಬೇಗನೆ ಆಗಲಿದೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಜುಲೈನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳ ಕಲಾಪಗಳು ವಿರೋಧ ಪಕ್ಷದ ನಾಯಕರಿಲ್ಲದೇ ನಡೆದವು. ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ. ಆದರೆ, ವಿರೋಧ ಪಕ್ಷದ ನಾಯಕರ ನೇಮಕದ ಸುಳಿವೇ ಇಲ್ಲ. ವಿರೋಧ ಪಕ್ಷದ ನಾಯಕನ ನೇಮಕ ತಡವಾಗಿದೆ. ಆದಷ್ಟು ಬೇಗ ನೇಮಕ ಮಾಡಿ ಎಂದು ಈ ಹಿಂದೆಯೂ ನಾನು ವರಿಷ್ಠರಿಗೆ ಮನವಿ ಮಾಡಿದ್ದೇನೆ. ಡಿಸೆಂಬರ್‌ ಅಧಿವೇಶನದೊಳಗೆ ನೇಮಕ ಮಾಡಲು ಒತ್ತಡ ಹೇರುತ್ತೇನೆ ಎಂದರು.

ಕೇಂದ್ರ ಸರಕಾರವು ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಹಾಪೂರವನ್ನೇ ಹರಿಸಿದೆ. ಬಹುಶಃ ಸಿದ್ದರಾಮಯ್ಯನವರಿಗೆ ಮಾಹಿತಿ ಕೊರತೆ ಇರಬಹುದು. ಎನ್‍ಡಿಆರ್‌ಎಫ್‍ನಲ್ಲಿ ಕೇಂದ್ರ ಸರಕಾರವು ಕಳೆದ 9 ವರ್ಷಗಳಲ್ಲಿ ₹12,784 ಕೋಟಿ ಬಿಡುಗಡೆ ಮಾಡಿದೆ. ಎಸ್‍ಡಿಆರ್‌ಎಫ್‍ನಲ್ಲಿ ಕೇಂದ್ರ ಸರಕಾರವು ಕಳೆದ 9 ವರ್ಷಗಳಲ್ಲಿ ₹3,377 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರಕಾರವು 2015 ರಿಂದ 2024ರವರೆಗೆ 5.23 ಲಕ್ಷ ಕೋಟಿ ನೇರ ಅನುದಾನ ನೀಡಿದೆ ಎಂದು ವಿವರ ನೀಡಿದರು. ಕೇಂದ್ರ ಸರಕಾರವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ₹37,510 ಕೋಟಿ ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಸದ್ಯ 54 ಯೋಜನೆಗಳ 2,431 ಕಿ.ಮೀ ಉದ್ದದ ಹೆದ್ದಾರಿ ಕಾಮಗಾರಿ ₹42,266 ಕೋಟಿ ಅನುದಾನದಲ್ಲಿ ಚಾಲ್ತಿಯಲ್ಲಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಕಾರ್ಯಾರಂಭ ಮಾಡುತ್ತಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಮುಂದಿನ ಮಾರ್ಚ್ ವೇಳೆಗೆ ಸಿದ್ಧ ಆಗಲಿದೆ ಎಂದು ವಿವರ ನೀಡಿದರು.

ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ₹3,573 ಕೋಟಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡಿನಲ್ಲಿ 11.75 ಲಕ್ಷ ರೈತರಿಗೆ ₹20 ಸಾವಿರ ಕೋಟಿ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 59 ಲಕ್ಷ ರೈತರಿಗೆ ನೇರವಾಗಿ ವರ್ಷಕ್ಕೆ ₹6 ಸಾವಿರವನ್ನು ನೀಡುತ್ತಿದ್ದಾರೆ. ರಾಜ್ಯ ಸರಕಾರ ಮೊದಲು ನಾನು ಇದ್ದಾಗ ₹ 4 ಸಾವಿರ ಹೆಚ್ಚುವರಿಯಾಗಿ ನೀಡುತ್ತಿದ್ದು, ಸಿದ್ದರಾಮಯ್ಯರ ಸರಕಾರ ಅದನ್ನೂ ಸ್ಥಗಿತಗೊಳಿಸಿದ್ದಾರೆ ಎಂದು ಆಕ್ಷೇಪಿಸಿದರು. ರಸಗೊಬ್ಬರ ಸಹಾಯಧನ ಈ ತನಕ ₹19,567 ಕೋಟಿ ನೀಡಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ₹5,451 ಕೋಟಿ ನೀಡಲಾಗಿದೆ. ಭದ್ರಾ ಯೋಜನೆಗೆ ₹5,300 ಕೋಟಿಯ ಅನುಮೋದನೆ ಲಭಿಸಿದೆ. ರಾಜ್ಯದ ರೈಲು ಮಾರ್ಗಗಳ ವಿದ್ಯುದೀಕರಣಕ್ಕೆ ಕೇಂದ್ರ ಸರಕಾರವು ₹1,722 ಕೋಟಿ ವೆಚ್ಚ ಮಾಡಿದೆ. ರಾಜ್ಯದ ರೈಲು ಯೋಜನೆಗಳಿಗೆ 2013ರಲ್ಲಿ ₹800 ಕೋಟಿ ನೀಡಿದರೆ, ಈಗ ₹3,700 ಕೋಟಿ ನೀಡಲಾಗುತ್ತಿದೆ. ಬೆಂಗಳೂರಿನ ಯಶವಂತಪುರ ಮತ್ತು ದಂಡು ರೈಲು ನಿಲ್ದಾಣ ಅಭಿವೃದ್ಧಿಗೆ ಕೇಂದ್ರ ಸರಕಾರವು ₹380 ಕೋಟಿ, ₹525 ಕೋಟಿ ವ್ಯಯಿಸುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿ ₹450 ಕೋಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಮೂರನೇ ಮತ್ತು ನಾಲ್ಕನೇ ಮಾರ್ಗಕ್ಕೆ ಹಣ ನೀಡಲಾಗುತ್ತಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here