ರೈಲ್ವೇ ಖಾಸಗೀಕರಣದ ವಿರುದ್ದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದೆದುರು ಪ್ರತಿಭಟನೆ- ಪ್ರತಿಭಟನೆಯಲ್ಲಿ ಭಾಗಿಯಾದ ಜಿಲ್ಲೆಯ ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳು

ಮಂಗಳೂರು: ದೇಶದ ಆರ್ಥಿಕತೆಯ ಜೀವಾಳ ಹಾಗೂ ಜನತೆಯ ಜೀವನಾಡಿ ರೈಲ್ವೇ ವಲಯದ ಖಾಸಗೀಕರಣ ಖಂಡಿಸಿ ರೈತ ಕಾರ್ಮಿಕರ ನೇತ್ರತ್ವದಲ್ಲಿ ಇಂದು ದೇಶದಾದ್ಯಂತ ಎಲ್ಲಾ ರೈಲ್ವೇ ನಿಲ್ದಾಣದೆದುರು ಪ್ರತಿಭಟನೆ ನಡೆಸಬೇಕೆಂಬ ತೀರ್ಮಾನದ ಮೇರೆಗೆ ಜಿಲ್ಲೆಯ ರೈತ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ನಗರದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದೆದುರು ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೇಂದ್ರದ ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ನೀತಿಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಯಾದವ ಶೆಟ್ಟಿ, ಕೇಂದ್ರದ ನರೇಂದ್ರ ಮೋದಿ ಸರಕಾರವು ನವ ಉದಾರೀಕರಣ ನೀತಿಗಳನ್ನು ಅತ್ಯಂತ ವೇಗವಾಗಿ ಜಾರಿಗೊಳಿಸುತ್ತಿರುವ ಪರಿಣಾಮವಾಗಿ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಗಳ ಕೈಗೊಪ್ಪಿಸುವ ತವಕದಲ್ಲಿದೆ. ರೈಲ್ವೇ ಖಾಸಗೀಕರಣದಿಂದಾಗಿ ರೈಲ್ವೇಯಲ್ಲಿ ದುಡಿಯುವ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ಮಾತ್ರವಲ್ಲದೆ ಜನಸಾಮಾನ್ಯರ ಬದುಕು ಕೂಡ ಅಪಾಯದ ಅಂಚಿನತ್ತ ಸಾಗಲಿದೆ. ಹಾಗೂ ರೈಲ್ವೇ ತಯಾರಿಕಾ ಕಾರ್ಖಾನೆಗಳನ್ನು ನವರತ್ನಗಳಂತಿರುವ ರೈಲ್ವೇ ಉತ್ಪಾದನಾ ಘಟಕಗಳನ್ನು ನಾಶ ಮಾಡುತ್ತಿದೆ. ರೈಲ್ವೇ ಪ್ರಯಾಣ ದರಗಳು ವಿಪರೀತವಾಗಿ ಹೆಚ್ಚಲಿದ್ದು, ರೈಲ್ವೇ ಭೂಮಿಗಳೂ ಕೂಡ ಕಾರ್ಪೊರೇಟ್ ಕಂಪೆನಿಗಳ ಪಾಲಾಗಲಿದೆ. ಒಟ್ಟಿನಲ್ಲಿ ರೈಲ್ವೇ ಖಾಸಗೀಕರಣದ ಮೂಲಕ ದೇಶವನ್ನೇ ಮಾರಲು ಹೊರಟ ನರೇಂದ್ರ ಮೋದಿ ಸರಕಾರವನ್ನು ಕಿತ್ತೊಗೆಯದೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು. ಎಐಟಿಯುಸಿ ಜಿಲ್ಲಾ ನಾಯಕ ಸೀತಾರಾಮ ಬೇರಿಂಜರವರು ಮಾತನಾಡಿ, ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ರಚಿಸಿದ ಬಿಬೇಕ್ ರಾಯ್ ಸಮಿತಿ ಶಿಫಾರಸ್ಸಿನಂತೆ ರೈಲ್ವೇಯನ್ನು 4 ವಿಭಾಗಗಳನ್ನಾಗಿ ವಿಭಜಿಸಿ ಖಾಸಗೀಕರಣಕ್ಕೆ ಮುಂದಾಗಿರುವುದು ನವ ಉದಾರೀಕರಣ ನೀತಿಯ ಫಲವಾಗಿದೆ ಎಂದು ಹೇಳಿದರು. INTUC ಜಿಲ್ಲಾ ನಾಯಕರಾದ ಸುರೇಶ್ ಬಾಬು ಮಾತನಾಡಿ, ರೈಲ್ವೇ ವಲಯವನ್ನು ವಿಭಜಿಸಿ ಖಾಸಗೀಕರಣಗೊಳಿಸುತ್ತಿರುವ ಆಡಳಿತ ವರ್ಗದ ಪ್ರಮುಖ ನೀತಿ ದೇಶಕ್ಕೆ ವಿನಾಶಕಾರಿಯಾಗಿದೆ ಎಂದು ಹೇಳಿದರು.

CITU ಜಿಲ್ಲಾ ನಾಯಕ ಸುಕುಮಾರ್ ತೊಕ್ಕೋಟು ಮಾತನಾಡಿ, ನವ ಉದಾರೀಕರಣ ವ್ಯವಸ್ಥೆಯಲ್ಲಿ ಖಾಸಗೀಕರಣ ಪ್ರಮುಖ ಪ್ರಕ್ರಿಯೆಯಾಗಿದ್ದು, ಅದು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸುವುದರ ಜೊತೆಗೆ ಅಗತ್ಯ ವಲಯಗಳಾದ ಆರೋಗ್ಯ ಶಿಕ್ಷಣ ಸಾರಿಗೆ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ ಗಣಿ ಅರಣ್ಯ ನೀರು ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ಗಳ ಕೈಗೆ ಹಸ್ತಾಂತರಿಸುವುದಾಗಿದೆ ಎಂದು ಹೇಳಿದರು. ಜಂಟಿ ವೇದಿಕೆಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ,ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ಜನತೆಗೆ ಎಸಗಿದ ದ್ರೋಹಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತಾ,ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ನಡೆಯಲಿರುವ ಪ್ರಚಾರಾಂದೋಲನದ ಮಹತ್ವವನ್ನು ವಿವರಿಸಿದರು. ರಾಜ್ಯ ರೈತ ಸಂಘದ ನಾಯಕರಾದ ರವಿಕಿರಣ ಪೂಣಚ, ಮಹೇಶ್ ಪ್ರಭು, ಮಹಿಳಾ ಮುಖಂಡರಾದ ಮಂಜುಳಾ ನಾಯಕ್ ರವರು ಮಾತನಾಡಿ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿದರು.

LEAVE A REPLY

Please enter your comment!
Please enter your name here