ನ.14ರಿಂದ 20ರವರೆಗೆ ಸಹಕಾರಿ ಸಪ್ತಾಹ ಆಚರಣೆ-ನ.18ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಸಹಕಾರಿ ಕಾರ್ಯಕ್ರಮ ಆಯೋಜನೆ

ಮಂಗಳೂರು: 70ನೇ ಅಖಿಲ ಭಾರತ ಸಹಕಾರ ಸಪ್ತಾಹ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳು ಎಂಬ ಧ್ಯೇಯ ವಾಕ್ಯದೊಂದಿಗೆ ನ.14ರಿಂದ 20ರವರೆಗೆ ದೇಶದಾದ್ಯಂತ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಂಗಳೂರಿನ ಊರ್ವ ಕ್ರಿಕೆಟ್‌ ಮೈದಾನದಲ್ಲಿ ನ.18ರಂದು ಸಾರ್ವಜನಿಕ, ಖಾಸಗಿ, ಸಹಕಾರಿ ಸಹಭಾಗಿತ್ವವನ್ನು ಬಲ ಪಡಿಸುವುದು ಎಂಬ  ವಿಷಯದೊಂದಿಗೆ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ನ ಅಧ್ಯಕ್ಷ ಡಾ.ಎಂ ಎನ್‌ ರಾಜೇಂದ್ರ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್, ಸಹಕಾರ ಇಲಾಖೆ ಹಾಗೂ ದ.ಕ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ ಗಳು ಮತ್ತು ಎಲ್ಲಾ ವಿಧದ ಸಹಕಾರ ಸಂಘಗಳ ಸಹಯೋಗದೊಂದಿಗೆ  ಈ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್‌, ಸಹಕಾರ ಸಚಿವ ಕೆ ಎನ್‌ ರಾಜಣ್ಣ, ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಜಿ ಟಿ ದೇವೇಗೌಡ, ವೇದವ್ಯಾಸ್‌ ಕಾಮತ್‌, ಡಾ. ಭರತ್‌ ಶೆಟ್ಟಿ, ಯಶ್‌ಪಾಲ್‌ ಸುವರ್ಣ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಕೆ ಪಿ ಸುಚರಿತ ಶೆಟ್ಟಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್‌ ಡಾ. ಕೆ ರಾಜೇಂದ್ರ, ಜಿಲ್ಲಾಧಿಕಾರಿ ಮುಲೈಮುಗಿಲನ್‌, ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ವಸ್ತು ಪ್ರದರ್ಶನ ಮಳಿಗೆ ಮತ್ತು ಸಹಕಾರ ಜಾಥಾವನ್ನು ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳ ಟ್ಯಾಬ್ಲೋದೊಂದಿಗೆ ಆಯೋಜಿಸಲಾಗಿದೆ. ಎಂದು ಅವರು ಹೇಳಿದರು.

ಪ್ರತೀ ವರ್ಷ ನ.14ರಿಂದ 20ರವರೆಗೆ ರಾಷ್ಟ್ರದಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತದೆ. ಪಂಡಿತ್‌ ನೆಹರೂ ರವರ ಜನ್ಮ ದಿನವಾದ ನ.14ರಂದು ಸಪ್ತಾಹದ ಉದ್ಘಾಟನೆ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here