ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಉದ್ಯೋಗಾಸಕ್ತರಿಂದ ಹಣ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜೈಸನ್ ಡಿಸೋಜ, ರೋಶಲ್ ಶರೀನ ರೋಡ್ರಿಗಸ್, ಅನಿತಾ ನರೋನಾ, ಬ್ರಾಂಡನ್ ಪಿಂಟೋ, ಸಾಯಿಶ್ ಕುಮಾರ್ ಎಸ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಆಲ್ವಿನ್ ಡಿಮೆಲ್ಲೊ ಎಂಬಾತನ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಂಗಳೂರಿನ ಕಂಕನಾಡಿಯಲ್ಲಿ ದಿ ಲೆಜೆಂಡ್ ಸಂಸ್ಥೆಯನ್ನು ಹೊಂದಿರುವ ಆಲ್ವಿನ್ ಡಿಮೆಲ್ಲೊ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುತ್ತಾನೆ. ಜೈಸನ್ ಡಿಸೋಜ, ರೋಶಲ್ ಶರೀನ ರೋಡ್ರಿಗಸ್, ಅನಿತಾ ನರೋನಾ, ಬ್ರಾಂಡನ್ ಪಿಂಟೋ, ಸಾಯಿಶ್ ಕುಮಾರ್ ಎಸ್ ಸೇರಿದಂತೆ ಹಲವರು ಈತನಿಗೆ ಹಣ ಪಾವತಿಸಿ ವಂಚನೆಗೊಳಗಾಗಿದ್ದಾರೆ. ಆಲ್ವಿನ್ ಮತ್ತು ಆತನ ಪತ್ನಿಯ ಬಣ್ಣದ ಮಾತುಗಳನ್ನು ನಂಬಿ ಆನ್ ಲೈನ್ ಮತ್ತು ನಗದಾಗಿ ಹಣ ಪಾವತಿಸಿದ್ದಾರೆ. ಆದರೆ ಆಲ್ವಿನ್ ವೀಸಾ ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಆಶ್ವಾಸನೆ ನೀಡಿ ಯಾಮಾರಿಸಿದ್ದಾನೆ. ವೀಸಾ ನೀಡದ ಕಾರಣ ಹಣವನ್ನು ಹಿಂದಕ್ಕೆ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ಇಂದು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಕಚೇರಿಗೂ ಬಾರದೇ ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರ ಸಂಪರ್ಕಕ್ಕೂ ಸಿಗದೆ ತಪ್ಪಿಸಿಕೊಂಡಿದ್ದಾನೆ.
ವಿದೇಶದಲ್ಲಿ ಉದ್ಯೋಗ ಬಯಸಿ ಬಂದ ನೂರಾರು ಆಕಾಂಕ್ಷಿಗಳು ಈತನ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಆಲ್ವಿನ್ ಡಿಮೆಲ್ಲೊ ಮತ್ತು ಆತನ ವೀಸಾ ವಂಚನೆ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿರುವುದಾಗಿ ವಂಚನೆಗೊಳಗಾದವರು ತಿಳಿಸಿದ್ದಾರೆ.