ಮಂಗಳೂರು(ನವದೆಹಲಿ): ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆ ನ.11ರಂದು ಅದ್ಭುತ ದೀಪೋತ್ಸವವನ್ನ ಆಚರಿಸಿದೆ. 51 ಘಾಟ್’ಗಳಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನ ಬೆಳಗಿಸುವ ಮೂಲಕ ‘ಗಿನ್ನಿಸ್ ವಿಶ್ವ ದಾಖಲೆ’ಯನ್ನು ನಿರ್ಮಿಸಿದೆ. ಈ ಮೂಲಕ ನಗರದ ಹಿಂದಿನ 17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.
ಡ್ರೋನ್ ಮೂಲಕ ದೀಪಗಳನ್ನು ಎಣಿಕೆ ಮಾಡಲಾಗಿದೆ. ‘ ದೀಪೋತ್ಸವ 2023’ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿಂದ ಪ್ರಮಾಣ ಪತ್ರ ಸ್ವೀಕರಿಸಿ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಡೀ ಅಯೋಧ್ಯೆಯ ಜನತೆಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದರು. ಈ ಅಪೂರ್ವ ಸಾಧನೆಗೆ 54 ದೇಶಗಳ ರಾಜತಾಂತ್ರಿಕರು ಸಾಕ್ಷಿಯಾಗಿದ್ದರು. ಈ ಅವಿಸ್ಮರಣೀಯ ಸಾಧನೆಗಾಗಿ ಮುಖ್ಯಮಂತ್ರಿ ಅವರನ್ನು ಅಭಿನಂದಿಸಲಾಯಿತು.
ದೀಪೋತ್ಸವ ಮೆರವಣಿಗೆಯಲ್ಲಿ ಭಗವಾನ್ ರಾಮನ ಸಾರವನ್ನು ಚಿತ್ರಿಸುವ 18 ವಿಸ್ಮಯ, ಸ್ಫೂರ್ತಿದಾಯಕ ಮತ್ತು ದೈವಿಕ ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಅವರು ಶನಿವಾರ ಅಯೋಧ್ಯೆಯಲ್ಲಿ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಅಯೋಧ್ಯೆಯಲ್ಲಿ ದೀಪೋತ್ಸವ ಸಂಪ್ರದಾಯ 2017ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚನೆಯೊಂದಿಗೆ ಪ್ರಾರಂಭವಾಯಿತು. 2017ರಲ್ಲಿ 51 ಸಾವಿರ ದೀಪಗಳನ್ನು ಬೆಳಗುವ ಮೂಲಕ ಪ್ರಾರಂಭವಾಗಿ, 2019ರಲ್ಲಿ 4.10 ಲಕ್ಷಕ್ಕೆ ಏರಿತು. 2020ರಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು 2021ರಲ್ಲಿ 9 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿ ಗಿನ್ನೆಸ್ ವಿಶ್ವ ದಾಖಲೆ ಬರೆದಿತ್ತು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Another year, another world record!Presenting to you – #Deepotsav2023.??♥️ #GuinnessWorldRecords#DeepotsavAyodhya #Deepotsav #Ayodhya #AyodhyaDeepotsav #ReligiousTourism #Ram #UPTourism #UttarPradesh #ThinkTourism #Deepotsav2023 #Deepawali #Diwali #Diwali2023 #Deepawali2023 pic.twitter.com/DiJIMZeiyN
— UP Tourism (@uptourismgov) November 11, 2023