ನಿರ್ಮಾಣ ಹಂತದ ಸುರಂಗ ಕುಸಿತ- 40 ಕಾರ್ಮಿಕರು ಸಿಲುಕಿರುವ ಶಂಕೆ-ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಮಂಗಳೂರು(ಉತ್ತರಾಖಂಡ): ಉತ್ತರಕಾಶಿಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಂದು ಭಾಗ ನ.12ರಂದು ಬೆಳಗ್ಗೆ ಕುಸಿದಿದೆ. ಸುಮಾರು 40 ಕಾರ್ಮಿಕರು ಒಳಗೆ ಸಿಲುಕಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಿಸಲಾಗುತ್ತಿರುವ ನಾಲ್ಕೂವರೆ ಕಿಲೋ ಮೀಟರ್ ಉದ್ದದ ಸುರಂಗದ 150 ಮೀಟರ್‌ನಷ್ಟು ಭಾಗ ಇಂದು ಮುಂಜಾನೆ 4 ಗಂಟೆಗೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಯ ಬಗ್ಗೆ ಮಾಹಿತಿ ಪಡೆದ ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ಅವರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಮತ್ತು ಸುರಂಗ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್‌ಎಚ್‌ಐಡಿಸಿಎಲ್) ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, 40 ಕಾರ್ಮಿಕರು ಸಿಕ್ಕಿಬಿದ್ದಿರುವ ಶಂಕೆ ಇದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಮ್ಲಜನಕದ ಕೊರತೆಯಿಂದ ಯಾವುದೇ ಹಾನಿಯಾಗದಂತೆ ಮೊದಲು ಹೆಚ್ಚುವರಿ ಆಮ್ಲಜನಕಕ್ಕಾಗಿ ಪೈಪ್‌ಗಳನ್ನು ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here