ನೇಜಾರು ನಾಲ್ವರ ಹತ್ಯೆ ಪ್ರಕರಣ-ಇರಿತಕ್ಕೊಳಗಾದರೂ ಶೌಚಾಲಯದಲ್ಲಿ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡ ವೃದ್ಧೆ-ಆಸ್ಪತ್ರೆಗೆ ದಾಖಲಿಸಿದ ಪೊಲೀಸರು- ಸ್ಥಿತಿ ಗಂಭೀರ

ಮಂಗಳೂರು(ಉಡುಪಿ): ನೇಜಾರಿನಲ್ಲಿ ನ.12ರ ಬೆಳಗ್ಗೆ ನಡೆದ ನಾಲ್ವರ ಬರ್ಬರ ಹತ್ಯೆ ವೇಳೆ 70 ವರ್ಷದ ವೃದ್ಧೆ ದುಷ್ಕರ್ಮಿಯ ಆಕ್ರಮಣದಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ತೆರಳಿ ಬಾಗಿಲು ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ಕೊಲೆಯಾದ ಹಸೀನಾ ಅವರ ಅತ್ತೆ ಹಾಜಿರಾ(70) ದುಷ್ಕರ್ಮಿಯಿಂದ ಪಾರಾದ ವೃದ್ಧೆ. ಬೆಳಗ್ಗೆ 8:30ರ ಸುಮಾರಿಗೆ ಹಸೀನಾ ಅವರ ಮನೆಗೆ ಬಂದ ಹಂತಕ ಹಸೀನಾ ಸೇರಿದಂತೆ ಅವರ ಇಬ್ಬರು ಹೆಣ್ಮಕ್ಕಳಾದ ಅಫ್ನಾನ್ ಮತ್ತು ಅಯ್ನಾಝ್ ಎಂಬವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಬೊಬ್ಬೆ ಕೇಳಿ ಹೊರಗೆ ಅಂಗಳದಲ್ಲಿ ಸೈಕಲ್ ತುಳಿಯುತ್ತಿದ್ದ ಕಿರಿಯ ಪುತ್ರ ಅಸೀಮ್(12) ಮನೆಯೊಳಗೆ ಓಡಿ ಬಂದಿದ್ದಾನೆ. ಈ ವೇಳೆ ಬಾಲಕನನ್ನೂ ಹಂತಕ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಹಾಜಿರಾ ಅವರ ಹೊಟ್ಟೆ ಭಾಗಕ್ಕೆ ದುಷ್ಕರ್ಮಿ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಅವರು ದುಷ್ಕರ್ಮಿಯ ಕೈಯಿಂದ ತಪ್ಪಿಸಿಕೊಂಡು ಮನೆಯ ಶೌಚಾಲಯದೊಳಗೆ ತೆರಳಿ ಬಾಗಿಲು ಮುಚ್ಚಿ ಚಿಲಕ ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗೆ ತನಿಖೆ ನಡೆಸುತ್ತಿದ್ದ ವೇಳೆ ಒಳಗಡೆಯಿಂದ ಬಾಗಿಲು ಮುಚ್ಚಿರುವ ಶೌಚಾಲಯವನ್ನು ಗಮನಿಸಿದ್ದಾರೆ. ಈ ವೇಳೆ ಬಾಗಿಲು ತೆರೆಯುವಂತೆ ಪೊಲೀಸರು ಮನವಿ ಮಾಡಿದಾಗ ಹೆದರಿದ್ದ ಹಾಜಿರಾ ಬಾಗಿಲು ತೆರೆಯಲು ಧೈರ್ಯ ತೋರಲಿಲ್ಲ. ಕೊನೆಗೆ ಬಾಗಿಲು ಮುರಿದು ಹಾಜಿರಾರನ್ನು ರಕ್ಷಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಟ್ಟೆಯ ಎಡಭಾಗಕ್ಕೆ ಇರಿತಕ್ಕೊಳಗಾಗಿರುವ ಹಾಜಿರಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಇಲ್ಲಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here