



ಮಂಗಳೂರು(ಕಾಸರಗೋಡು): ಕಾಸರಗೋಡು ಜಿಲ್ಲೆಯ ಅನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಬಬಿಯಾ ಮೊಸಳೆ ಸಾವನ್ನಪ್ಪಿದ ಒಂದು ವರ್ಷ ಒಂದು ತಿಂಗಳ ಬಳಿಕ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಂಡಿದೆ.







ದೇವಸ್ಥಾನದ ಕಲ್ಯಾಣಿಯಲ್ಲಿ ದೇವಮೊಸಳೆ ಎಂದೇ ಹೇಳಲಾಗುತ್ತಿದ್ದ ಬಬಿಯಾ ಎನ್ನುವ ಮೊಸಳೆ 75 ವರ್ಷಗಳ ಕಾಲ ಪೂಜಿಸಲ್ಪಟ್ಟಿದ್ದು, 2022ರ ಅಕ್ಟೋಬರ್ 9 ರಂದು ಮೃತಪಟ್ಟಿತ್ತು. ಬಬಿಯಾ ಮೃತಪಟ್ಟ ಒಂದು ವರ್ಷ ಒಂದು ತಿಂಗಳ ಬಳಿಕ ಮೊಸಳೆಯೊಂದು ಪ್ರತ್ಯಕ್ಷವಾಗಿರುವುದು ಭಕ್ತರಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.



ಅನಂತಪದ್ಮನಾಭ ದೇವಸ್ಥಾನದ ಕಲ್ಯಾಣಿಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ದೇವರ ಮೊಸಳೆಯಾಗಿದ್ದು, ಬಬಿಯಾ ಹೆಚ್ಚಿನ ಸಮಯವನ್ನು ಕಲ್ಯಾಣಿಯ ಎಡ ಭಾಗದಲ್ಲಿರುವ ಗುಹೆಯಂತಿರುವ ಭಾಗದಲ್ಲಿ ಕಾಣಸಿಗುತ್ತಿತ್ತು. ಮಧ್ಯಾಹ್ನದ ಪೂಜೆಯ ನಂತರ ನೈವೇದ್ಯ ಇಟ್ಟು ಮೊಸಳೆಯನ್ನು ಕರೆಯಲಾಗುತ್ತಿದ್ದು ಮೊಸಳೆ ನೈವೇದ್ಯ ಸ್ವೀಕರಿಸುತ್ತಿತ್ತು. ಹೀಗೆ 75 ವರ್ಷಗಳ ಕಾಲ ಪೂಜಿಸಲ್ಪಟ್ಟಿದ್ದ ಬಬಿಯಾ ಮೊಸಳೆ ಕಳೆದ ವರ್ಷ ಮೃತಪಟ್ಟಿತ್ತು. ಸಂಪತ್ತಿನ ರಾಜನಾದ ಕುಬೇರನ ಒಂಭತ್ತು ನಿಧಿಗಳಲ್ಲಿ ಒಂದಾದ ಮಕರ(ಮೊಸಳೆ). ರಾಶಿ ಚಕ್ರದ 10ನೇ ಚಿಹ್ನೆಯೂ ಆಗಿದ್ದು ಬಬಿಯಾ ಜಾಗದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದ್ದು ಭಕ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ












