ಯಕ್ಷಗಾನದಿಂದ ಮಾನಸಿಕ ಒತ್ತಡ ದೂರ: ಸಂತೋಷ್ ಶೆಟ್ಟಿ ಪುಣೆ
ಮಂಗಳೂರು: ಯಕ್ಷಗಾನ ಹಲವು ರೋಗಗಳಿಗೆ ಔಷಧ ರೂಪದಲ್ಲಿ ಪರಿಣಾಮ ಬೀರುತ್ತದೆ. ಯಕ್ಷಗಾನ ವೀಕ್ಷಣೆಯಿಂದ ಮಾನಸಿಕ ಒತ್ತಡ ದೂರವಾಗಿ ನೆಮ್ಮದಿ ಪಡೆಯಬಹುದು. ತಾಳಮದ್ದಳೆ ಸಪ್ತಾಹದ ಮೂಲಕ ಯಕ್ಷಾಂಗಣ ಸಂಸ್ಥೆ ಕನ್ನಡವನ್ನು ಉಳಿಸುವ ಕೆಲಸ ಮಾಡುತ್ತಿದೆ’ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪುಣೆ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ನ.19ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ, ಹನ್ನೊಂದನೇ ವರ್ಷದ ನುಡಿ ಹಬ್ಬ ‘ಶ್ರೀಹರಿ ಚರಿತ್ರೆ’ ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲಿ ಆಸಕ್ತಿ ಬೆಳೆಯಲಿ:
ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ‘ಇಂದಿನ ಪೀಳಿಗೆಯನ್ನು ಮೊಬೈಲ್ ವೀಕ್ಷಣೆಯಿಂದ ದೂರ ಸರಿಯಲು ಯಕ್ಷಗಾನ ಮತ್ತು ತಾಳಮದ್ದಳೆ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸಬೇಕು. ಕಲೆ ಉಳಿಸಲು ಎಲ್ಲರೂ ನೆರವಾಗಬೇಕು’ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ‘ನಮ್ಮ ಮಣ್ಣಿನ ಕಲೆಯನ್ನು ವಿವಿಧ ಆಯಾಮಗಳಲ್ಲಿ ಮೆರೆಸುವ ಯಕ್ಷಾಂಗಣದಂತಹ ಸಂಸ್ಥೆಗಳಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಕೈಲಾದ ನೆರವು ನೀಡಲಾಗುವುದು’ ಎಂದರು.
ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಹಮದಾಬಾದ್ ಉದ್ಯಮಿ ಹಾಗೂ ಉಪ್ಪಳ ರಾಜರಾಜೇಶ್ವರಿ ದೇವಳದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಸಂಸ್ಥೆಯ ಗೌರವ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಶುಭಾಶಂಸನೆಗೈದರು.
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ:
ಯಕ್ಷಗಾನ ಕಲಾ ಪೋಷಕರಿಗಾಗಿ ನೀಡಲಾಗುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ವನ್ನು ಉದ್ಯಮಿ – ಸಮಾಜ ಸೇವಕ ಯಾದವ ಕೋಟ್ಯಾನ್ ಪೆರ್ಮುದೆ ಅವರಿಗೆ ಪ್ರದಾನ ಮಾಡಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಯರಾಜ್ ಅಮೀನ್ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಯಕ್ಷಗಾನ ತುಳುನಾಡಿನ ಹೆಮ್ಮೆಯ ಕಲೆಯಾಗಿ ನೈತಿಕವಾಗಿ, ಶೈಕ್ಷಣಿಕವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಅಭಿನಂದನಾ ಭಾಷಣ ಮಾಡಿದರು. ಮಹಿಳಾ ಪ್ರತಿನಿಧಿ ನಿವೇದಿತಾ ಎನ್.ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ-ಹರೇಕಳ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಕರುಣಾಕರ ಶೆಟ್ಟಿ ಪಣಿಯೂರು, ಸುಧಾಕರ ರಾವ್ ಪೇಜಾವರ, ಸಿದ್ದಾರ್ಥ ಅಜ್ರಿ, ಶರತ್ ಕುಮಾರ್ ಕದ್ರಿ, ಸುಮಾ ಪ್ರಸಾದ್ ಉಪಸ್ಥಿತರಿದ್ದರು
‘ಧ್ರುವ ಚರಿತ್ರೆ’ ತಾಳಮದ್ದಳೆ:
‘ಶ್ರೀ ಹರಿ ಚರಿತ್ರೆ’ ಏಕಾದಶ ಸರಣಿಯ ಮೊದಲ ತಾಳಮದ್ದಳೆ ‘ಧ್ರುವ ಚರಿತ್ರೆ’ ಭವ್ಯಶ್ರೀ ಕುಲ್ಕುಂದ ಅವರ ಭಾಗವತಿಕೆಯಲ್ಲಿ ಜರಗಿತು. ಪ್ರಸಿದ್ಧ ಅರ್ಥಧಾರಿಗಳು ಭಾಗವಹಿಸಿದ್ದರು.