ಉತ್ತರಕಾಶಿ ಸುರಂಗ ಕುಸಿತ-ಕಾರ್ಮಿಕರ ವಿಡಿಯೋ ಹಂಚಿಕೊಂಡ ರಕ್ಷಣಾ ಸಿಬ್ಬಂದಿ-ಅಂತರಾಷ್ಟ್ರೀಯ ತಜ್ಞರಿಂದ ರಕ್ಷಣಾ ಕಾರ್ಯಾಚರಣೆ-ನಿಟ್ಟುಸಿರು ಬಿಟ್ಟ ಕುಟುಂಬಸ್ಥರು

ಮಂಗಳೂರು(ಉತ್ತರಾಖಂಡ): ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದೊಳಗೆ ಕಳೆದ 10 ದಿನಗಳಿಂದ ಸಿಲುಕಿಕೊಂಡಿರುವ ಕಾರ್ಮಿಕರ ಮೊದಲ ವಿಡಿಯೋವನ್ನು ರಕ್ಷಣಾ ಸಿಬ್ಬಂದಿ ನ.21ರ ಇಂದು ಬಿಡುಗಡೆ ಮಾಡಿದ್ದಾರೆ.

ಸುರಂಗದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರ ರಕ್ಷಣೆಗಾಗಿ ಹಲವು ರೀತಿಯ ಪ್ರಯತ್ನ ಮಾಡಲಾಗುತ್ತಿದ್ದು, ನ.20ರಂದು ಅವಶೇಷಗಳಡಿ ರಂಧ್ರ ಕೊರೆದ ರಕ್ಷಣಾ ಸಿಬ್ಬಂದಿ, ಆರು ಇಂಚು ವ್ಯಾಸದ ಪೈಪ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದರು. ಆಹಾರವನ್ನು ಪೂರೈಸಲು ಅಳವಡಿಸಲಾಗಿದ್ದ ಈ 6 ಇಂಚಿನ ಪೈಪ್‌ಲೈನ್‌ ಮೂಲಕ ಎಂಡೋಸ್ಕೋಪಿಕ್ ಕ್ಯಾಮೆರಾವನ್ನು ಕಳುಹಿಸಿದ್ದು, ಸುರಂಗದೊಳಗಿನ ದೃಶ್ಯಗಳನ್ನು ಕ್ಯಾಮೆರಾ ಸೆರೆಹಿಡಿದಿದೆ. ಕಾರ್ಮಿಕರು ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿದ್ದು, ಪೈಪ್‌ಲೈನ್ ಮೂಲಕ ಕಳುಹಿಸಿದ ಆಹಾರಗಳನ್ನು ತೆಗೆದುಕೊಳ್ಳುತ್ತಿರುವುದು, ಪರಸ್ಪರ ಮಾತನಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದ ಕಾರ್ಮಿಕರ ಕುಟುಂಬಸ್ಥರು ನಿಟ್ಟುಸಿರುವ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಚಾರ್‌ಧಾಮ್‌ ಸರ್ವಋತು ರಸ್ತೆ ಯೋಜನೆಯಡಿ ಸುರಂಗ ನಿರ್ಮಿಸುತ್ತಿದ್ದ ವೇಳೆ ಭೂಕುಸಿತ ಸಂಭವಿಸಿ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು.

ರಕ್ಷಣಾ ಕಾರ್ಯಾಚರಣೆಗೆ ಅಂತರಾಷ್ಟ್ರೀಯ ಸುರಂಗ ತಜ್ಞರನ್ನು ಕರೆಸಲಾಗಿದ್ದು, ಇಂಟರ್‌ನ್ಯಾಷನಲ್ ಟನಲಿಂಗ್‌ ಅಂಡರ್‌ ಗ್ರೌಂಡ್‌ ಸ್ಪೇಸ್‌ ಪ್ರೊಫೆಸರ್‌ ಅರ್ನಾಲ್ಡ್‌ ಡಿಕ್ಸ್‌ ಸಿಲ್ಕ್ಯಾರಾ ಆಗಮಿಸಿದ್ದು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here