ಮಂಗಳೂರು(ಬೆಂಗಳೂರು): ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶ್ವ ಮೀನುಗಾರಿಕೆ ದಿನವಾದ ನ. 22ರಂದು ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳ ಸೇವೆಗೆ ಚಾಲನೆ ನೀಡಿದೆ. ಈ ಮತ್ಸ್ಯವಾಹಿನಿ ಮೂಲಕ ತಾಜಾ ಮೀನುಗಳು ಇನ್ನು ಬೆಂಗಳೂರಿನ ಮನೆ ಮನೆ ತಲುಪಲಿದೆ.
ಮೀನುಗಾರ ಕುಟುಂಬದವರಿಗೆ ನಿಶ್ಚಿತ ಆದಾಯ, ಮೀನುಗಳಿಗೆ ಹೆಚ್ಚಿನ ಬೇಡಿಕೆ, ನಿರುದ್ಯೋಗಿಗಳಿಗೆ ಉದ್ಯೋಗ ಮುಂತಾದ ಆಶಯದೊಂದಿಗೆ ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರೂಪಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಸದ್ಯ 150 ವಾಹನ ಸೇವೆಯನ್ನು ಮೀನುಗಾರಿಕಾ ಇಲಾಖೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಬೇಡಿಕೆಯನ್ನು ನೋಡಿಕೊಂಡು ಮತ್ತಷ್ಟು ಹೆಚ್ಚಳಗೊಳಿಸುವ ಚಿಂತನೆ ಸರಕಾರದ್ದು. ಮಾತ್ರವಲ್ಲದೆ, ಜಿಲ್ಲಾ ಕೇಂದ್ರಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. 150 ಮತ್ಸ್ಯವಾಹಿನಿ ವಾಹನಗಳು ನಗರದಾದ್ಯಂತ ಸಂಚರಿಸಿ, ಬೆಳಗ್ಗೆ ತಾಜಾ ಮೀನುಗಳ ಮಾರಾಟವನ್ನು ಮಾಡಿದರೆ, ಸಂಜೆ ವೇಳೆಗೆ ಮೀನು ಖಾದ್ಯಗಳ ಮಾರಾಟ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.
ಈ ಯೋಜನೆಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ವಾಹನ ಭದ್ರತಾ ಠೇವಣಿ 2 ಲಕ್ಷ ರೂ. ಹಾಗೂ ಮಾಸಿಕ 3000 ರೂ. ಬಾಡಿಗೆಯನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನು ಖಾದ್ಯ ಮಾಡುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೆ 150 ವಾಹನಗಳನ್ನು ಸರ್ಕಾರದಿಂದ ವಿತರಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಎಲ್ಲಾ ಅಗತ್ಯ ನೆರವನ್ನೂ ನೀಡುತ್ತದೆ. ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂ. ಸಹಾಯ ಧನವನ್ನು 3 ಲಕ್ಷ ರೂಪಾಯಿಗೆ ನಾವು ಏರಿಕೆ ಮಾಡಿದ್ದೇವೆ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಯೋಜನೆಯನ್ನು ಕಾರ್ಯಾರಂಭ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೀನನ್ನು ನಾವು ದೇವರ ಸ್ವರೂಪ ಎಂದು ಕರೆಯುತ್ತೇವೆ. ಶ್ರೀಮನ್ ನಾರಾಯಣನಿಗೆ ಮೀನನ್ನು ಹೋಲಿಸುತ್ತೇವೆ. ನಾವು ಚುನಾವಣೆಗೆ ಮುಂಚಿತವಾಗಿ ಮೀನುಗಾರಿಕಾ ಸಮುದಾಯಕ್ಕೆ ಸಾಕಷ್ಟು ಭರವಸೆ ನೀಡಿದ್ದೆವು. ಅವನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಸರ್ಕಾರದ ಸಹಕಾರ ಪಡೆದು ಸಮುದಾಯದವರಿಗೆ ಸಾಕಷ್ಟು ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ. ಕೇವಲ ಸಮುದ್ರದಲ್ಲೇ ಮೀನುಗಾರಿಕೆ ಮಾಡುವುದಕ್ಕಿಂತ ಸಿಹಿ ನೀರಿನ ಮೀನುಗಾರಿಕೆ ಮಾಡಲು ಸಮುದಾಯದವರು ಮುಂದಾಗಬೇಕು. ಸರ್ಕಾರ ಈಗಾಗಲೇ ಏತ ನೀರಾವರಿ ಮೂಲಕ ಸಾಕಷ್ಟು ಕೆರೆಗಳನ್ನು ತುಂಬಿಸಿದ್ದು ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು.