



ಮಂಗಳೂರು(ಅಮೆರಿಕ): ಕರುಳು ಕ್ಯಾನ್ಸರ್ ರೋಗಿಯ ಕರುಳಿನೊಳಗೆ ಜೀವಂತ ನೊಣವೊಂದು ಪತ್ತೆಯಾಗಿದ್ದು, ವೈದ್ಯಲೋಕದಲ್ಲಿ ಅಚ್ಚರಿಗೆ ಕಾರಣವಾಗಿದೆ.







ಮಿಸೌರಿಯ 63 ವರ್ಷದ ವ್ಯಕ್ತಿ ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಪ್ರತಿ ತಿಂಗಳ ಅಂತ್ಯದಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ. ಈ ಚೆಕ್ಅಪ್ ಸಮಯದಲ್ಲಿ ಕರುಳಿನೊಳಗೆ ಕ್ಯಾಮೆರಾವನ್ನು ಇರಿಸಿ ತಪಾಸಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿಯ ತಪಾಸಣೆ ವೇಳೆ ವ್ಯಕ್ತಿಯ ಕರುಳಿನ ಒಳಗೆ ಜೀವಂತ ನೊಣ ಇರುವುದು ಪತ್ತೆಯಾಗಿದೆ. ಆದರೆ ಆ ನೊಣ ವ್ಯಕ್ತಿಯ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದೇ ವೈದ್ಯರಿಗೂ ತಿಳಿದಿಲ್ಲ. ಸದ್ಯ ಈ ಘಟನೆ ಎಲ್ಲೆಡೆ ಭಾರೀ ವೈರಲ್ ಆಗಿದೆ. ಲ್ಯಾಡ್ಬೈಬಲ್ ವರದಿಯ ಪ್ರಕಾರ, ಮಿಸೌರಿ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ತಜ್ಞರು ರೋಗಿಯನ್ನು ತಪಾಸಣೆ ನಡೆಸಿ ನೊಣವು ಅವನ ಕರುಳನ್ನು ಹೇಗೆ ಪ್ರವೇಶಿಸಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ನೊಣ ತನ್ನ ದೇಹವನ್ನು ಹೇಗೆ ಪ್ರವೇಶಿಸಿದೆ ಎಂದು ಆ ವ್ಯಕ್ತಿಗೂ ತಿಳಿದಿಲ್ಲ. ತನಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವ್ಯಕ್ತಿ ಹೇಳಿದ್ದಾನೆ.



ಮಿಸೌರಿ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿ ಮುಖ್ಯಸ್ಥ ಮ್ಯಾಥ್ಯೂ ಬೆಚ್ಟೋಲ್ಡ್ ಹೇಳುವಂತೆ, ನೊಣವು ಅವನ ಬಾಯಿ ಅಥವಾ ಹಿಂಭಾಗದ ಮೂಲಕ ದೇಹವನ್ನು ಪ್ರವೇಶಿಸಿರಬಹುದು. ಜೀರ್ಣಕಾರಿ ಕಿಣ್ವಗಳು ಮತ್ತು ಹೊಟ್ಟೆಯ ಆಮ್ಲವು ನೊಣವನ್ನು ನುಂಗಿದ್ದರೆ ನೊಣ ಜೀವಂತವಾಗಿ ಇರುತ್ತಿರಲಿಲ್ಲ. ಆದರೂ ಕರುಳಿನೊಳಗೆ ಜೀವಂತ ನೊಣ ಹೇಗೆ ಪತ್ತೆಯಾಯಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದ್ದರಿಂದ ಹಣ್ಣು, ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯಬೇಕು ಮತ್ತು ನೊಣಗಳನ್ನು ದೂರವಿಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.












