ಕುಣಿಗಲ್‌ ಸಮೀಪ ಭೀಕರ ರಸ್ತೆ ಅಪಘಾತ-ಕಂಬಳ ನೋಡಿ ವಾಪಸ್ಸಾಗುತ್ತಿದ್ದ ದ.ಕ. ಜಿಲ್ಲೆಯ ಇಬ್ಬರು ಮೃತ್ಯು-ಮೂವರಿಗೆ ಗಂಭೀರ ಗಾಯ

ಮಂಗಳೂರು(ತುಮಕೂರು): ಬೋರ್ ವೆಲ್ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ.ಕ. ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯ ಹೆದ್ದಾರಿ 33ರ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಬಳಿ ನ.26ರ ಮುಂಜಾನೆ ಈ ಅಪಘಾತ ನಡೆದಿದೆ.

ಮೃತರನ್ನು ಬಜ್ಪೆ ಮೂಲದ ಕಿಶೋರ್ ಶೆಟ್ಟಿ(35) ಮತ್ತು ಫಿಲೀಪ್ ಮೇರಿ ಲೋಬೋ (34) ಎಂದು ಗುರುತಿಸಲಾಗಿದೆ. ನಿತೀಶ್ ಭಡಾರಿ(35), ಪ್ರೀತಿ ಲೋಬೋ(29) ಮತ್ತು ಹರೀಶ್(62) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ “ರಾಜಾ-ಮಹಾರಾಜ ಜೋಡುಕರೆ ಕಂಬಳ” ವೀಕ್ಷಿಸಿ ಮಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ರಾತ್ರಿ 1:15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದವರು ನೆಲಮಂಗಲ ಹಾಗೂ ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೆ ದಾರಿತಪ್ಪಿ ತುಮಕೂರಿಗೆ ಹೋಗಿದ್ದಾರೆ. ಬಳಿಕ ಅಲ್ಲಿಂದ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ನಿಂದ ಮಂಗಳೂರಿಗೆ ತೆರಳುತ್ತಿರಬೇಕಾದರೆ ಚಿಗಣಿ ಪಾಳ್ಯ ಗ್ರಾಮದ ಬಳಿ ಕಾರಿಗೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೊಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

 

LEAVE A REPLY

Please enter your comment!
Please enter your name here