ಟೆಕ್‌ ಫೆಸ್ಟ್‌ ವೇಳೆ ಕಾಲ್ತುಳಿತ-ನಾಲ್ವರು ವಿದ್ಯಾರ್ಥಿಗಳು ಸಾವು-60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ-ನಾಲ್ವರ ಸ್ಥಿತಿ ಗಂಭೀರ

ಮಂಗಳೂರು(ತಿರುವನಂತಪುರ): ಕೇರಳದ ಕೊಚ್ಚಿಯಲ್ಲಿರುವ ಮಾಹಿತಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನ.25ರ ರಾತ್ರಿ ಹಮ್ಮಿಕೊಂಡಿದ್ದ ‘ಟೆಕ್‌ ಫೆಸ್ಟ್‌’ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಟೆಕ್‌ ಫೆಸ್ಟ್‌’ ಅಂಗವಾಗಿ 1000–1500 ಆಸನ ಸಾಮರ್ಥ್ಯದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭಾಂಗಣ ಭಾಗಶಃ ತುಂಬಿತ್ತು. ಆದರೆ ಈ ವೇಳೆ ಹಠಾತ್ತನೆ ಮಳೆ ಸುರಿದಿದ್ದರಿಂದ ನೆರೆದಿದ್ದ ವಿದ್ಯಾರ್ಥಿಗಳು ಆಶ್ರಯ ಅರಸಿ ಸಭಾಂಗಣದತ್ತ ಓಡಲಾರಂಭಿಸಿದರು. ಇದರಿಂದಾಗಿ ದುರಂತ ಸಂಭವಿಸಿತು’ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಎಂ.ಆರ್‌ ಅಜಿತ್‌ ಕುಮಾರ್‌ ತಿಳಿಸಿದ್ದಾರೆ.

‘ಗಾಯಗೊಂಡಿರುವ ವಿದ್ಯಾರ್ಥಿ‌ಗಳನ್ನು ಕಲಮಶ್ಶೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ. ‘ಟಿಕೆಟ್‌ ಪಡೆದವರಿಗೆ ಮಾತ್ರವೇ ಸಭಾಂಗಣದೊಳಗೆ ಪ್ರವೇಶ ಇತ್ತು. ಆದರೆ ಸಭಾಂಗಣದ ಹೊರಗೆ ಹಲವು ಸ್ಥಳೀಯರೂ ಇದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ತುರ್ತು ಸಭೆ ಕರೆದು ದುರಂತದ ಬಗ್ಗೆ ಮಾಹಿತಿ ಪಡೆದು, ತನಿಖೆಗೆ ಆದೇಶಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವರು ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here