ಮಂಗಳೂರು(ಬೀದರ್): ಸೈಕಲ್ ಬಳಸುವುದು ಆರೋಗ್ಯಕ್ಕೂ, ಪರಿಸರಕ್ಕೂ ಒಳ್ಳೆಯದು ಎಂದಿರುವ ಬೀದಿರ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.4ರಂದು ತಮ್ಮ ಕಚೇರಿಗಳಿಗೆ ಸೈಕಲ್ನಲ್ಲಿ ತೆರಳಿ ಸಾರ್ವಜನಿಕರ ಗಮನ ಸೆಳೆಯುವುದರೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ.
ಬೀದರ್ನ ಬಹಮನಿ ಕೋಟೆಯ ಬಳಿ ಇರುವ ತಮ್ಮ ನಿವಾಸಗಳಿಂದ ತಮ್ಮ ಕಚೇರಿಗಳಿಗೆ ಇಬ್ಬರು ಅಧಿಕಾರಿಗಳೂ ಸೈಕಲ್ನಲ್ಲಿ ಹೋಗಿದ್ದಾರೆ. ಅವರು ಸೈಕಲ್ ತುಳಿಯುತ್ತಿದ್ದುದ್ದನ್ನು ಕಂಡು ಸಾರ್ವಜನಿಕರು ಆಶ್ಚರ್ಯದಿಂದ ನೋಡಿದ್ದಾರೆ. ಸೈಕಲ್ ತುಳಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರಕ್ಕೂ ಒಳ್ಳೆಯದು. ಹೀಗಾಗಿ, ನಾನು ಮತ್ತು ಎಸ್ಪಿ ಅವರು ಸೈಕಲ್ನಲ್ಲಿ ಕಚೇರಿಗೆ ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಕೊಡಿಸುವ ಬದಲು ಸೈಕಲ್ ಕೊಡಿಸಬೇಕು. ಇದರಿಂದ, ಅಪ್ರಾಪ್ತರಿಗೆ ಆಗುವ ಅಪಘಾತಗಳನ್ನು ತಪ್ಪಿಸಬಹುದು ಎಂದಿದ್ದಾರೆ. ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸೈಕಲ್ಗಳನ್ನು ಉಪಯೋಗಿಸಬೇಕು. ಪೋಷಕರು ಕೂಡ ತಮ್ಮ ಮಕ್ಕಳಿಗೆ ಸೈಕಲ್ಗಳನ್ನೇ ಕೊಡಿಸಬೇಕು ಎಂದು ಎಸ್ಪಿ ಚನ್ನಬಸವಣ್ಣ ಎಸ್.ಎಲ್ ಹೇಳಿದ್ದಾರೆ.
ಸೈಕಲ್ ನಲ್ಲಿ ಕಚೇರಿಗೆ ತೆರಳುವ ವೇಳೆ ಇಬ್ಬರು ಅಧಿಕಾರಿಗಳು ಹೆಲ್ಮೆಟ್ ಧರಿಸಿದ್ದು ನಿಯಮಗಳನ್ನು ಪಾಲಿಸಿದ್ದಾರೆ. ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದರು ಬೀದರ್ ನಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ ಎನ್ನುವುದನ್ನು ಅಧಿಕಾರಿಗಳಿಬ್ಬರು ಸೈಕಲ್ ನಲ್ಲಿ ಹೋಗುವ ಚಿತ್ರ ಸೂಚ್ಯವಾಗಿ ಹೇಳುತ್ತಿದೆ. ಚಿತ್ರದಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ ರಾಜಾರೋಷವಾಗಿ ಅಧಿಕಾರಿಗಳ ಹಿಂದೆ ಮತ್ತು ಪಕ್ಕದಿಂದ ಚಲಿಸುತ್ತಿರುವುದು ಚಿತ್ರದಲ್ಲಿ ಕಾಣಬಹುದಾಗಿದೆ.