ಮಂಗಳೂರು(ಬೆಳಗಾವಿ): ಪ್ರೀತಿಸಿದ ಯುವತಿಯನ್ನು ಕರೆದುಕೊಂಡು ಯುವಕ ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ಯುವತಿಯ ಸಂಬಂಧಿಕರು ಯುವಕನ ಮನೆಯನ್ನು ಧ್ವಂಸಗೊಳಿಸಿ, ಆತನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿರುವುದಾಗಿ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಂಟಮೂರಿ ಗ್ರಾಮದ ದುಂಡಪ್ಪ ಮತ್ತು ಪ್ರಿಯಾಂಕಾ ಎಂಬವರು ಪರಸ್ಪರ ಪ್ರೇಮಿಸುತ್ತಿದ್ದರು. ಈ ನಡುವೆ ಪ್ರಿಯಾಂಕಾಳಿಗೆ ಬೇರೊಬ್ಬನ ಜೊತೆ ವಿವಾಹ ನಿಶ್ಚಯವಾಗಿತ್ತು. ಈ ವಿಚಾರ ತಿಳಿದ ದುಂಡಪ್ಪ ರವಿವಾರ ತಡರಾತ್ರಿ ಪ್ರಿಯಾಂಕಾಳನ್ನು ಕರೆದುಕೊಂಡು ಓಡಿ ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಸೋಮವಾರ ಬೆಳಗಿನ ಜಾವ 3:30ರ ಸುಮಾರಿಗೆ ದುಂಡಪ್ಪನ ಮನೆಗೆ ನುಗ್ಗಿ ಮಲಗಿದ್ದ ಅವರ ತಾಯಿ ಕಮಲವ್ವ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರನ್ನು ಮನೆಯಿಂದ ಹೊರಗೆಳೆದು ಬೆತ್ತಲೆಗೊಳಿಸಿ ಕಂಬವೊಂದಕ್ಕೆ ಕಟ್ಟಿ ಹಲ್ಲೆಗೈದು, ಮನೆಯನ್ನು ದ್ವಂಸಗೊಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದೂರಲಾಗಿದೆ. ಘಟನೆಗೆ ಸಂಬಂಧಿಸಿ ಕಾಕತಿ ಪೊಲೀಸ್ ಠಾಣೆಯಲ್ಲಿ ಮಹಿಳೆಯರು ಸೇರಿ ಒಂಭತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಕೃತ್ಯದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದೊಂದು ಅಮಾನವೀಯ ಕೃತ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದೇರೀತಿ ಓಡಿ ಹೋಗಿರುವ ಯುವಕ-ಯುವತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಸಿದ್ದರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಒಂದು ಕೆಎಸ್ ಆರ್ ಪಿ ತುಕುಡಿ, ಒಬ್ಬ ಎಸಿಪಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.