ಮಂಗಳೂರು(ನವದೆಹಲಿ): ವಿಯಟ್ನಾಂನ 75ರ ವೃದ್ಧೆ ಮಹಿಳೆಯೊಬ್ಬರು ಕಳೆದ 50 ವರ್ಷಗಳಿಂದ ಬರೀ ನೀರು, ತಂಪು ಪಾನೀಯ ಮಾತ್ರ ಕುಡಿದರೂ ಆರೋಗ್ಯವಾಗಿರುವ ಮೂಲಕ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.
ಮಿಸ್ ಬುಯಿ ಲೋಯಿ ಎಂಬ ಹೆಸರಿನ ವಿಯಟ್ನಾಂನ ಈ ಮಹಿಳೆ ತನ್ನ ಇಳಿ ವಯಸ್ಸಿನಲ್ಲಿಯೂ ತುಂಬಾ ಆರೋಗ್ಯಕರವಾಗಿದ್ದಾರೆ. ಇವರಿಗೆ ಇತರ ಯಾವುದೇ ಘನ ಆಹಾರ ತಿನ್ನಬೇಕೆಂದು ಅನಿಸುವುದೇ ಇಲ್ವಂತೆ. ಬರೀ ನೀರು ಮತ್ತು ಸಕ್ಕರೆಯಂಶವಿರುವ ಜ್ಯೂಸ್ ಇಷ್ಟೇ ಇವರ ಆಹಾರ. ಮಿಸ್ ಬುಯಿ ಲೋಯಿ ಮಹಿಳೆಯೊಬ್ಬರ ಜೊತೆ ಗಾಯವಾದ ಸೈನಿಕರಿಗೆ ಚಿಕಿತ್ಸೆ ನೀಡಲು ಬೆಟ್ಟ ಹತ್ತುತ್ತಿದ್ದರಂತೆ. ಆಗ ಅವರಿಗೆ ಸಿಡಿಲು ಬಡಿದು ಪ್ರಜ್ಞೆ ತಪ್ಪಿತ್ತು. ಎಚ್ಚರವಾದ ಮೇಲೆ ಅವರ ಜೊತೆಯಲ್ಲಿದ್ದ ಮಹಿಳೆ ಜ್ಯೂಸ್ ಕುಡಿಸಿದ್ದರು. ಇದಾದ ಬಳಿಕ ಅವರಿಗೆ ಯಾವುದೇ ಘನ ಆಹಾರ ತಿನ್ನಲು ಅಷ್ಟು ಇಷ್ಟವಾಗುತ್ತಿರಲಿಲ್ಲ. ಸ್ವಲ್ಪ ಸಮಯ ಹಣ್ಣು, ಮತ್ತಿತರ ಆಹಾರ ಸೇವಿಸಿದರು. ಆದರೆ 1970ರಿಂದ ಇದುವರೆಗೆ ಅವರು ಹಣ್ಣು ಹಾಗೂ ಇತರ ಘನ ಆಹಾರ ಸೇವಿಸುವುದನ್ನು ಸಂಪೂರ್ಣ ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಮಿಸ್ ಬುಯಿ ಲೋಯಿ ಅವರ ಮನೆಯ ಫ್ರಿಡ್ಜ್ ತುಂಬಾ ಬರೀ ನೀರು ಹಾಗೂ ಜ್ಯೂಸ್ಗಳಿವೆ. ಅದರಲ್ಲೂ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಡಯಟ್ನಿಂದಾಗಿ ಹೆರಿಗೆಯಾದಾಗ ಮಕ್ಕಳಿಗೆ ಹಾಲುಣಿಸಲು ಕೂಡ ಅವರಿಗೆ ಸಾಧ್ಯವಾಗಿರಲಿಲ್ಲ. ಸುಮಾರು 50 ವರ್ಷಗಳಿಂದ ಬರೀ ನೀರು, ಜ್ಯೂಸ್ ಅಷ್ಟೇ ಸೇವಿಸುತ್ತಿರುವ ಮಿಸ್ ಬುಯಿ ಲೋಯಿ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಯಿಲ್ಲದೆ ಚೆನ್ನಾಗಿದ್ದಾರೆ. ಈ ಮೂಲಕ ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ್ದಾರೆ.