ಮಂಗಳೂರು: ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಸಮಾಜ ಸೇವಕ, ಹಿರಿಯ ರಂಗ ಕಲಾವಿದ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ (68) ಅವರು ಪತ್ನಿ ವಸುಂಧರಾ ಶೆಟ್ಟಿ (58) ಡಿ.12ರ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಕಳೆದ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಶಕ್ತರ ನೆರವಿಗೆ ಧಾವಿಸುವ ಲೀಲಾಧರ ಶೆಟ್ಟಿ ಸಾಮಾಜಿಕ ಕಳಕಳಿ ಹೊಂದಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಅತ್ಯಂತ ಆಪ್ತರಾಗಿದ್ದ ಇವರು ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ, ಅತ್ಯುತ್ತಮ ನಟ ಮತ್ತು ನಿರ್ದೇಶಕರಾಗಿದ್ದರು.
ಕರಾವಳಿಯ ಮನೆಮಾತಾಗಿದ್ದ ನಮ್ಮ ಟಿವಿಯ ಬಲೆ ತೆಲಿಪಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೀಲಾಧರ ಶೆಟ್ಟಿ ಅವರ ಪ್ರಶಂಸಾ ಕಾಪು ತಂಡ ಹಲವು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಲೀಲಾಧರ ಶೆಟ್ಟಿ ಕೆಲ ವರ್ಷಗಳಿಂದ ಹಣಕಾಸಿನ ತೊಂದರೆಯಲ್ಲಿದ್ದರು ಎನ್ನಲಾಗಿದ್ದು, ಪತ್ನಿ ವಸುಂಧರಾ ಶೆಟ್ಟಿ ಅವರು ಕ್ಯಾನ್ಸರ್ ಪೀಡಿತರಾಗಿದ್ದರು ಎನ್ನಲಾಗಿದೆ. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.