ಮಹಾದೇವ್ ಬೆಟ್ಟಿಂಗ್ ಆ್ಯಪ್‌ ಮಾಲೀಕ ರವಿ ಉಪ್ಪಲ್ ದುಬೈನಲ್ಲಿ ಬಂಧನ-ಶೀಘ್ರದಲ್ಲೇ ಭಾರತಕ್ಕೆ ಗಡಿಪಾರು

ಮಂಗಳೂರು(ನವದೆಹಲಿ): ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನ ಇಬ್ಬರು ಪ್ರಮುಖ ಮಾಲೀಕರಲ್ಲೊಬ್ಬರಾದ ರವಿ ಉಪ್ಪಲ್ ಅವರನ್ನು ಇಡಿ ಆದೇಶದ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್‌ ಕಾರ್ನರ್‌ ನೋಟಿಸ್ ಆಧಾರದ ಮೇಲೆ ಕಳೆದ ವಾರ ದುಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರವಿ ಉಪ್ಪಲ್ ಜೊತೆಗೆ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದುಬೈ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ರವಿ ಉಪ್ಪಲ್ ಅವರು 6,000 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಇದರಲ್ಲಿ ನಿರ್ಗಮಿತ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರ ಹೆಸರೂ ಕೂಡಾ ಕೇಳಿಬಂದಿದ್ದು. ಮೂಲಗಳ ಪ್ರಕಾರ, ಇಡಿ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್‌ನಿಂದ ಉಪ್ಪಲ್ ಅವರನ್ನು ಬಂಧಿಸಲಾಗಿದೆ. ರವಿಯನ್ನು ಹಸ್ತಾಂತರಿಸಲು ಸಿದ್ಧ ಎಂದು ದುಬೈ ಅಧಿಕಾರಿಗಳು ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಮಹಾದೇವ್ ಆ್ಯಪ್‌ನ ಎರಡನೇ ಪ್ರವರ್ತಕ ಸೌರಭ್ ಚಂದ್ರಕರ್ ನನ್ನು ಶೀಘ್ರದಲ್ಲೇ ಯುಎಇಯಲ್ಲಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು. ಆತನ ಬಂಧನದ ಬಳಿಕ ಆತನನ್ನೂ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.ರಾಯ್‌ಪುರದ ವಿಶೇಷ ನ್ಯಾಯಾಲಯ ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ಇಬ್ಬರ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.

 

LEAVE A REPLY

Please enter your comment!
Please enter your name here