ವಿಶೇಷ ಚೇತನ ಮಕ್ಕಳ ಜಾನಪದ ನೃತ್ಯೋತ್ಸವ-ಜನಮನ ಗೆದ್ದ `ಟ್ವಿಂಕ್ಲಿಂಗ್ ಸ್ಟಾರ್’-23

ಮಂಗಳೂರು: ವಿಶೇಷ ಚೇತನರ ಜಾನಪದ ನೃತ್ಯೋತ್ಸವ `ಟ್ವಿಂಕ್ಲಿಂಗ್ ಸ್ಟಾರ್’ಗೆ ಮಂಗಳೂರಿನ ಪುರಭವನದಲ್ಲಿ ಚಾಲನೆ ನೀಡಲಾಯಿತು. ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ರಾಜ್ಯದ 37 ವಿಶೇಷ ಮಕ್ಕಳ ಶಾಲೆಯ 500ಕ್ಕೂ ಅಧಿಕ ಭಿನ್ನ ಸಾಮರ್ಥ್ಯದ ಮಕ್ಕಳ ಸಾಹಿತ್ಯ ಭಾಗಿಯಾಗಿದ್ದರು.

ಮಂಗಳೂರಿನ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮಥ್ರ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆ 20 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಪುರಭವನದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಭಿನ್ನ ಸಾಮಥ್ರ್ಯದ ಮಕ್ಕಳ ಜಾನಪದ ನೃತ್ಯೋತ್ಸವ ಟ್ವಿಕ್ಲಿಂಗ್ ಸ್ಟಾರ್ 2023ಗೆ ಡಿ.13ರಂದು ಚಾಲನೆ ನೀಡಲಾಯಿತು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಡೋಲು ಬಾರಿಸುವ ಮೂಲಕ ಎರಡು ದಿನಗಳ ವಿಶೇಷ ಚೇತನರ ಜಾನಪದ ನೃತ್ಯೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಾನ್ನಿಧ್ಯ ಸಂಸ್ಥೆಯಲ್ಲಿ ಭಿನ್ನ ಸಾಮಥ್ರ್ಯದ ಮಕ್ಕಳು ಊಟ ಮಾಡುವುದು ಹೇಗೆ ಎಂಬುದರಿಂದ ಹಿಡಿದು ಯಕ್ಷಗಾನ, ಕಲೆ, ಕ್ರೀಡಾ ಕ್ಷೇತ್ರದಲ್ಲಿ ತಾವು ಸಾಮಾನ್ಯರಿಗಿಂತ ಯಾವುದೇ ರೀತಿಯಲ್ಲಿ ಕಮ್ಮಿ ಇಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದರು. ಪಾಲಿಕೆಯಲ್ಲಿಯೂ ಭಿನ್ನ ಚೇತನರು ಹಾಗೂ ಅವರ ಪೋಷಕರಿಗಾಗಿ ಜಾರಿಯಲ್ಲಿರುವ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಈ ಭಿನ್ನ ಚೇತರನ್ನು ತರಬೇತು, ವಿದ್ಯಾಭ್ಯಾಸ ನೀಡುವ ಶಿಕ್ಷಕರು ಅಭಿನಂದನಾರ್ಹರು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುರು ಬೆಳದಿಂಗಲು ಸಂಸ್ಥಾಪಕ ಪದ್ಮರಾಜ್ ಮಾತನಾಡಿ, ಅತ್ಯುತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವ ದೊರಕಿದ್ದು, ಸಾನ್ನಿಧ್ಯ ಸೇರಿದಂತೆ ಭಿನ್ನ ಚೇತನರಿಗಾಗಿ ದುಡಿಯುವ ಸಂಸ್ಥೆಯ ಜತೆ ಕೈಜೋಡಿಸಲು ಸದಾ ಸಿದ್ಧ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿನೇಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಮನಪಾ ಸದಸ್ಯ ಕಿಶೋರ್ ಕೊಟ್ಟಾರಿ, ಸಂತೋಷ್ ಅರೇಂಜರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಸಿಕ್ವೇರಾ ಶುಭ ಹಾರೈಸಿದರು. ರೋಟರಿ ಸಂಸ್ಥೆ ವಲಯ 3ರ ಸಹಾಯಕ ಗವರ್ನರ್ ಆದ ಶಿವಾನಿ ಬಾಳಿಗ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮ್ಯಾಂಚೆಸ್ಟರ್ ಗಲ್ಫ್ ಟ್ರೇಡಿಂಗ್ ಯೂರೋ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ಲಾ ಮೋನು, ಮನಪಾ ಸದಸ್ಯೆ ಶಕೀಲಾ ಕಾವ, ಹೋಪ್ ಫೌಂಡೇಶನ್‍ನ ಸೈಫ್ ಸುಲ್ತಾನ್, ಸಾನ್ನಿಧ್ಯ ಸಂಸ್ಥೆಯ ಅಧ್ಯಕ್ಷ ಮಹಾಬಲ ಮಾರ್ಲ, ಹಾಗೂ ಸಂಸ್ಥೆಯ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರಾಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ಮಂಗಳೂರು ನೆಹರೂ ಮೈದಾನದಿಂದ ಪುರಭವನದವರೆಗೆ ವಿಶೇಷ ಚೇತನರ ಸಾರ್ವಜನಿಕ ಅರಿವಿನ ಮೆರವಣಿಗೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ವಿಶೇಷ ಚೇತನರು ಸೇರಿದ್ದ ಪುರಭವನದಲ್ಲಿ ಅತ್ಯಂತ ವ್ಯವಸ್ಥಿತ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಸುವಲ್ಲಿ ಸಾನ್ನಿಧ್ಯ ಸಂಸ್ಥೆಯ ಶಿಕ್ಷಕರು ಹಾಗೂ ಪದಾಧಿಕಾರಿಗಳು ಸಹಕರಿಸಿದರು. ಉದ್ಘಾಟನಾ ಸಮಾರಂಭದ ವೇಳೆ ಸಾನ್ನಿಧ್ಯ ಸಂಸ್ಥೆಯ ಮಕ್ಕಳು ವೇದಿಕೆಯ ಎದುರು ಹುಲಿವೇಷ ಕುಣಿತ ಪ್ರದರ್ಶಿಸಿ ಮನರಂಜಿಸಿದರು.

LEAVE A REPLY

Please enter your comment!
Please enter your name here