ಮಂಗಳೂರು(ನವದೆಹಲಿ): ಭದ್ರತೆ ಭೇದಿಸಿ ಲೋಕಸಭೆಗೆ ನುಗ್ಗಿದ ಪ್ರಕರಣದ ರೂವಾರಿ, ಆರನೇ ಆರೋಪಿಯ ಪತ್ತೆಗೆ ದೆಹಲಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ಮುಖ್ಯಸಂಚುಕೋರ, ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಕೋಲ್ಕತ್ತ ನಿವಾಸಿ ಲಲಿತ್ ಝಾ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ. ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರಿಂದ ಪ್ರೇರಿತರಾಗಿದ್ದ ಲಲಿತ್ ಹಾಗೂ ಇತರೆ ಆರೋಪಿಗಳು, ಇಡೀ ದೇಶದ ಗಮನ ಸೆಳೆಯುವ ಕೃತ್ಯವನ್ನು ಎಸಗುವ ಯೋಜನೆ ಹಾಕಿಕೊಂಡಿದ್ದರು. ಇವರಿಗೆ ಯಾವುದೇ ಉಗ್ರ ಸಂಘಟನೆಗಳೊಂದಿಗೆ ನಂಟು ಇರುವ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿದ್ದ ಇವರು, ಬಳಿಕ ಫೇಸ್‌ಬುಕ್‌ನಲ್ಲಿ ಭಗತ್ ಸಿಂಗ್ ಫ್ಯಾನ್ ಪೇಜ್ ಸೇರಿಕೊಂಡಿದ್ದರು. ಲಲಿತ್, ಸಾಗರ್ ಶರ್ಮಾ ಹಾಗೂ ಮನೋರಂಜನ್ ವರ್ಷದ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿ ಸಂಸತ್ ಭವನಕ್ಕೆ ನುಗ್ಗುವ ಬಗ್ಗೆ ಯೋಜನೆ ಹಾಕಿಕೊಂಡಿದ್ದರು. ಬಳಿಕ ನೀಲಂ ಹಾಗೂ ಅಮೋಲ್‌ನನ್ನು ಸೇರಿಸಿಕೊಂಡಿದ್ದರು. ಶಿಕ್ಷಕನಾಗಿದ್ದ ಲಲಿತ್ ಯೋಜನೆಯ ನಾಯಕತ್ವ ವಹಿಸಿಕೊಂಡಿದ್ದ. ಮುಂಗಾರು ಅಧಿವೇಶನದ ವೇಳೆ ಸಂಸತ್‌ಗೆ ಭೇಟಿ ನೀಡಿ ಎಲ್ಲಾ ಪ್ರವೇಶ ದ್ವಾರಗಳನ್ನು ಅಧ್ಯಯನ ಮಾಡಲು ಮನೋರಂಜನ್‌ಗೆ ನಿರ್ದೇಶಿಸಿದ್ದ. ‘ಜೂನ್‌ನಲ್ಲಿ ದೆಹಲಿಗೆ ಬಂದಿದ್ದ ಮನೋರಂಜನ್, ಸಂಸದರ ಶಿಫಾರಸಿನ ವೀಕ್ಷಕರ ಪಾಸ್ ಮೂಲಕ ಸಂಸತ್ ಭವನಕ್ಕೆ ಭೇಟಿ ನೀಡಿದ್ದ. ಅಲ್ಲಿ ಶೂಗಳ ತಪಾಸಣೆಯಾಗುವುದಿಲ್ಲ ಎನ್ನುವುದನ್ನು ಅರಿತುಕೊಂಡಿದ್ದ’ ಎಂದು ತನಿಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ, ನಾಲ್ಕು ಮಂದಿಯೊಂದಿಗೆ ಲಲಿತ್ ಸಂಸತ್ ಭವನಕ್ಕೆ ಬಂದಿದ್ದ. ಕೇವಲ ಇಬ್ಬರಿಗೆ ಮಾತ್ರ ಪಾಸ್ ಇದ್ದಿದ್ದರಿಂದ, ಸಾಗರ್, ಮನೋರಂಜನ್‌ರನ್ನು ಲೋಕಸಭೆಯ ಒಳಗೆ ಕಳುಹಿಸಿ, ನೀಲಂ ಹಾಗೂ ಅಮೋಲ್‌ನನ್ನು ಸಂಸತ್ ಭವನದ ಗೇಟ್ ಬಳಿ ನಿಲ್ಲುವಂತೆ ಸೂಚಿಸಿದ್ದ. ಅಲ್ಲದೆ ನಾಲ್ವರ ಮೊಬೈಲ್ ಫೋನ್‌ಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಲೋಕಸಭೆಯ ಒಳಗೆ ಹೋದವರು ಅಲ್ಲಿ ಹಳದಿ ಬಣ್ಣದ ಹೊಗೆ ಹಾರಿಸಿದರೆ, ಹೊರಗಿದ್ದವರು, ಹಳದಿ ಹಾಗೂ ಕೆಂಪು ಹೊಗೆಯನ್ನು ಹಾರಿಸಿದ್ದರು. ಲೋಕಸಭೆಯ ಒಳಗೆ ಹಾಗೂ ಸಂಸತ್‌ನ ಆವರಣದಲ್ಲಿ ಹಾರಿಸಲಾದ ‘ಸ್ಮೋಕ್ ಕ್ಯಾನ್’ಗಳನ್ನು ಅಮೋಲ್ ಮಹಾರಾಷ್ಟ್ರದ ಕಲ್ಯಾಣ್‌ನಿಂದ ತಂದಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಬಳಿಕ, ಲಲಿತ್ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ತಮ್ಮ ಗುಂಪಿನ ಇನ್ನೊಬ್ಬ ಸದಸ್ಯನಾಗಿದ್ದ ವಿಶಾಲ್ ಶರ್ಮಾ ಅಲಿಯಾಸ್ ವಿಕ್ಕಿ ಜತೆಗೂ ವಿಡಿಯೊ ಹಂಚಿಕೊಂಡಿದ್ದ. ಬಳಿಕ ಸಂಸತ್ ಭವನದ ಹೊರಗೆ ನೀಲಂ ಹಾಗೂ ಅಮೋಲ್‌ರನ್ನು ವಶಕ್ಕೆ ಪಡೆಯಲಾಯಿತು. ಎಂದು ಅಧಿಕಾರಿ ಹೇಳಿದ್ದಾರೆ. ರಾಜಸ್ಥಾನ–ಹರಿಯಾಣ ಗಡಿಯ ನೀಮ್‌ರಾನ ಎಂಬಲ್ಲಿ ಲಲಿತ್‌ನ ಕೊನೆಯ ಲೊಕೇಷನ್ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಡಿ.10ರಂದು ಈ ಐವರು ಗುರುಗ್ರಾಮದಲ್ಲಿರುವ ವಿಶಾಲ್ ಶರ್ಮಾನ ನಿವಾಸದಲ್ಲಿ ಸೇರಿದ್ದರು. ಪ್ರಕರಣ ಸಂಬಂಧ ನೀಲಂ, ಮನೋರಂಜನ್, ಅಮೋಲ್ ಹಾಗೂ ವಿಶಾಲ್, ದೆಹಲಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.