ಮಂಗಳೂರು(ಹೊಸದಿಲ್ಲಿ): ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಲಲಿತ್ ಝಾನನ್ನು ಡಿ.14ರ ತಡರಾತ್ರಿ ಬಂಧಿಸಲಾಗಿದೆ.
ಭಗತ್ ಸಿಂಗ್ ಮತ್ತು ಚೇಗ್ವೆರಾ ಘಟನೆಯಿಂದ ಪ್ರೇರಣೆ ಪಡೆದು ಸಂಚು ರೂಪಿಸಿದ್ದ ಆರೋಪಿ ಝಾ ನಾಟಕೀಯ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ. ಕರ್ತವ್ಯ ಪಥದ ಬಿಗಿ ಭದ್ರತೆಯ ನಡುವೆಯೂ ಈತ ತಪ್ಪಿಸಿಕೊಂಡಿದ್ದ. ಈತನ ಪತ್ತೆಗಾಗಿ ಮೂರು ತಂಡಗಳನ್ನು ನಿಯೋಜಿಸಲಾಗಿತ್ತು. ಹಲವು ರಾಜ್ಯಗಳ ಪೊಲೀಸರು ನಡೆಸಿದ ಸಂಘಟಿತ ಕಾರ್ಯಾಚರಣೆಯಿಂದ ಈತನನ್ನು ಪತ್ತೆ ಮಾಡಲಾಗಿದೆ. ಝಾ ಜತೆಗೆ ಮತ್ತೊಬ್ಬ ಪ್ರಮುಖ ಶಂಕಿತ ಆರೋಪಿ ಮುಕೇಶ್ ಎಂಬಾತನನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಬಿಹಾರ್ ಮೂಲದ ಲಲಿತ್ ಝಾ, ಈ ಗುಂಪಿನ ನಾಯಕನಾಗಿದ್ದ. ಸಂಸತ್ತಿನಲ್ಲಿ ಹಳದಿ ಹೊಗೆ ಸಿಂಪಡಿಸುವ ಕೃತ್ಯಕ್ಕೆ ಮುನ್ನ ಗುಂಪಿನ ಇತರ ಸದಸ್ಯರಾದ ಮನೋರಂಜನ್, ಸಾಗರ್ ಶರ್ಮಾ, ನೀಲಂ ಅಝಾದ್ ಹಾಗೂ ಅಮೋಲ್ ಶಿಂಧೆ ತಮ್ಮ ಮೊಬೈಲ್ ಗಳನ್ನು ಈತನ ಬಳಿ ಇಟ್ಟಿದ್ದರು. ಈತನ ಪಾತ್ರ ಮತ್ತಷ್ಟು ದೊಡ್ಡದು ಎಂಬ ಅಂಶ ತನಿಖೆಯಿಂದ ದೃಢಪಟ್ಟಿದೆ.
ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಬಂಗಾಳದಲ್ಲಿ ನೀಲಾಕ್ಷ ಐಚ್ ಎಂಬಾತನತ್ತ ದೃಷ್ಟಿ ಹಾಯಿಸಿದ್ದಾರೆ. ಭಿದಾನ್ ನಗರ ಸರ್ಕಾರಿ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಈತ ಸಮ್ಮೋಬಾದಿ ಸುಭಾಷ್ ಸಭಾ ಎಂಬ ಸ್ವಯಂಸೇವಾ ಸಂಘ ನಡೆಸುತ್ತಿದ್ದು, ಝಾ ಇದರ ಕಾರ್ಯದರ್ಶಿಯಾಗಿ ಕೆಲ ಕಾಲ ಕೆಲಸ ಮಾಡಿದ್ದ ಎಂದು ಮೂಲಗಳು ಹೇಳಿವೆ. ಸಂಸತ್ ಕೃತ್ಯದ ವಿಡಿಯೊವನ್ನು ಝಾ, ಐಚ್ ಜತೆ ಹಂಚಿಕೊಂಡಿದ್ದ ಎನ್ನಲಾಗಿದೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಭೆಯಲ್ಲಿ ಇಬ್ಬರೂ ಪರಸ್ಪರ ನಿಕಟರಾಗಿದ್ದು, ಬಿಹಾರದಿಂದ ಬಂಗಾಳಕ್ಕೆ ಬಂದು ಎನ್ ಜಿಓ ವಲಯದಲ್ಲಿ ನೈಪುಣ್ಯ ಸಾಧಿಸುವ ಬಗ್ಗೆ ಝಾ ನೆರವು ಕೋರಿದ್ದ. ಆಗ ತಮ್ಮ ಎನ್ ಜಿಓ ಸೇರುವಂತೆ ಐಚ್ ಕೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.