ರಾಜ್ಯದ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಶಿವಮೊಗ್ಗ ಏರ್‌ಪೋರ್ಟ್ ಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರಿಡಲು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ

ಮಂಗಳೂರು(ಬೆಳಗಾವಿ): ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರಿಡುವ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದ್ದು, ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ.

ಗುರುವಾರ ವಿಧಾನಸಭೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವಣ್ಣ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆ.ವಿ.ಪುಟ್ಟಪ್ಪ (ಕುವೆಂಪು) ಹೆಸರಿಡುವ ನಿರ್ಣಯ ಕೈಗೊಳ್ಳಲಾಗಿದೆ. ಬೃಹತ್‌ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌, ವಿಮಾನ ನಿಲ್ದಾಣಗಳಿಗೆ ಇತಿಹಾಸ ಪುರುಷರ ಹೆಸರಿಡುವ ಸಂಬಂಧ ಮಂಡಿಸಿದ ನಿರ್ಣಯಕ್ಕೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದರು. ಆ ಬಳಿಕ ನಿರ್ಣಯವನ್ನು ಅಂಗೀಕಾರ ಮಾಡಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿಯ ಅರವಿಂದ ಬೆಲ್ಲದ್, ರಾಜ್ಯದ ನಾಲ್ಕು ವಿಮಾನ ನಿಲ್ದಾಣಕ್ಕೆ ಮಹಾನ್‌ ವ್ಯಕ್ತಿಗಳ ಹೆಸರಿಡಲು ಕೈಗೊಂಡಿರುವುದು ಒಳ್ಳೆಯದು. ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ ಬಳಿಕ ಅಲ್ಲಿಂದ ಒಪ್ಪಿಗೆ ತರುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌, ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನ ಎಚ್.ಎನ್. ಕೋನರೆಡ್ಡಿ, ಅಬ್ಬಯ್ಯ ಪ್ರಸಾದ್‌, ರಾಜ್ಯ ಸರಕಾರದ ತೀರ್ಮಾನವನ್ನು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಸುನೀಲ್‌ ಕುಮಾರ್, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಅವರ ಹೆಸರು ಇಡುವುದನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಖಾದರ್, ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ ಹೆಸರಿಡಬೇಕೆಂಬ ಒತ್ತಾಯ ಇರುವ ಕಾರಣ ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಉತ್ತಮ ಎಂದು ಸಲಹೆ ಮಾಡಿದರು.

ಅನಂತರ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್‌, ಮುಂದಿನ ದಿನದಲ್ಲಿ ಕಲಬುರಗಿ, ಮೈಸೂರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯರಾದ ರಿಝ್ವಾನ್‌ ಅರ್ಷದ್‌, ಅಬ್ಬಯ್ಯ ಪ್ರಸಾದ್ ‘ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಬೇಕು’ ಎಂದು ಪ್ರಸ್ತಾಪಿಸಿದ್ದರಿಂದ ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಕ್ಸಮರ ಉಂಟಾಯಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

LEAVE A REPLY

Please enter your comment!
Please enter your name here