ಕೇಂದ್ರ ಸರಕಾರದ ಪ್ರಮುಖ ನಿರ್ಧಾರ-ಕೆಜಿ ಯಿಂದ ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ‘ಅಪಾರ್ ಕಾರ್ಡ್’ 

ಮಂಗಳೂರು: ದೇಶದ ನಾಗರಿಕರಿಗೆ ನೀಡುವ ಆಧಾರ್ ಕಾರ್ಡ್‌ನಂತೆಯೇ ವಿದ್ಯಾರ್ಥಿಗಳಿಗೂ ಅಪಾರ್‌ ಐಡಿ ಕಾರ್ಡ್‌ಗಳನ್ನು ನೀಡಲು ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿದೆ.  ಇದು ಶಿಕ್ಷಣ ಸಚಿವಾಲಯ ಮತ್ತು ಭಾರತ ಸರ್ಕಾರದಿಂದ ರಚಿಸಲ್ಪಟ್ಟ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಭಾರತದ ಪ್ರತಿ ಶಾಲಾ ವಿದ್ಯಾರ್ಥಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸರ್ಕಾರಿ, ಖಾಸಗಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೆಜಿಯಿಂದ ಪಿಜಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ಆಧಾರ್ ಮಾದರಿಯ ಅಪಾರ್ ಗುರುತಿನ ಚೀಟಿಯನ್ನು ಪಡೆಯಲಿದ್ದಾರೆ.

ಅಪಾರ್‌ ಎಂದರೆ ಅಟೊಮೆಟೆಡ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟರ್. ‘ಒನ್ ನೇಷನ್ – ಒನ್ ಐಡಿ’ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಅಪಾರ್‌ ಐಡಿ ಕಾರ್ಡ್ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ವಿದ್ಯಾರ್ಥಿಗಳಿಗೆ ಅಪಾರ್‌ ಐಡಿ ಕಾರ್ಡ್ ನೀಡಲು ಪೋಷಕರ ಅನುಮತಿ ಪಡೆದು ವಿದ್ಯಾರ್ಥಿಗಳ ವಿವರ ಸಂಗ್ರಹಿಸುವಂತೆ ಕೇಂದ್ರ ಶಿಕ್ಷಣ ಇಲಾಖೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರವು ಈ ಅಪಾರ್ ಕಾರ್ಡ್ ನ ಜವಾಬ್ದಾರಿಯನ್ನು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಗೆ ವಹಿಸಿದೆ. ವಿದ್ಯಾರ್ಥಿಯ ಬಗ್ಗೆ ವಿವರವಾದ ಮಾಹಿತಿಯನ್ನು ಕಾರ್ಡ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಈಗ ಎಲ್ಲ ಕೆಲಸಗಳಿಗೂ ಆಧಾರ್ ಅನ್ನು ಹೇಗೆ ಬಳಸುತ್ತೇವೆಯೋ ಅದೇ ರೀತಿ ಅಪಾರ್ ಕಾರ್ಡ್ ವಿದ್ಯಾರ್ಥಿಗಳಿಗೆ ವೃತ್ತಿ ದೃಷ್ಟಿಯಿಂದಲೂ ಉಪಯುಕ್ತವಾಗಲಿದೆ.

ವಿದ್ಯಾರ್ಥಿಗಳಿಗೆ ಈ ಕಾರ್ಡ್ ಡಿಜಿಟಲ್ ದಾಖಲೆಯಂತಿದೆ. ಇದು ಅವರ ಶೈಕ್ಷಣಿಕ ಸಾಧನೆಗಳು, ಪದವಿಗಳು, ವಿದ್ಯಾರ್ಥಿವೇತನಗಳು ಮತ್ತು ಇತರ ಕ್ರೆಡಿಟ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಇದು ಡಿಜಿಟಲ್ ರೂಪದಲ್ಲಿ ವಿದ್ಯಾರ್ಥಿಯ ಶಾಲಾ ಪಯಣದ ಬಗ್ಗೆ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ಡಿಜಿಟಲ್ ಕಾರ್ಡ್ ಆಗಿರುತ್ತದೆ. ವಿದ್ಯಾರ್ಥಿಯು ಶಾಲೆಗೆ ಸೇರಿದಾಗಿನಿಂದ ಶಿಕ್ಷಣ ಮುಗಿಯುವವರೆಗೆ ಎಲ್ಲಾ ವಿವರಗಳು ಅಪಾರ್ ಕಾರ್ಡ್‌ನಲ್ಲಿ ಇರುತ್ತವೆ. ಇದಲ್ಲದೆ, ಇದರಿಂದ ಒಂದು ಶಾಲೆಯಿಂದ ಇನ್ನೊಂದಕ್ಕೆ ವರ್ಗಾವಣೆಯಾಗುವ ವಿದ್ಯಾರ್ಥಿಗಳಿಗೆ, ದೇಶದ ಯಾವುದೇ ಭಾಗದಲ್ಲಿ ಪ್ರವೇಶವನ್ನು ಪಡೆಯುವುದು ಸುಲಭವಾಗಲಿದೆ. ಈ ಹೊಸ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ‘ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್  ಎಜುಲಾಕರ್ ಗೆ ಲಿಂಕ್ ಮಾಡಲಾಗುತ್ತದೆ. ಈ ಅಪಾರ್ ಸಂಖ್ಯೆಯನ್ನು ವಿದ್ಯಾರ್ಥಿಯ ಜೀವಿತಾವಧಿ ಐಡಿ ಎಂದು ಪರಿಗಣಿಸಲಾಗುತ್ತದೆ.

LEAVE A REPLY

Please enter your comment!
Please enter your name here