ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತನ ಕೊಡುಗೆ-3,500 ಕೆಜಿ ತೂಕದ 108 ಅಡಿ ಉದ್ದದ ಅಗರಬತ್ತಿ ತಯಾರಿ

ಮಂಗಳೂರು(ಗಾಂಧಿನಗರ): ಗುಜರಾತ್‌ನ ವಡೋದರದಲ್ಲಿ ಅಯೋಧ್ಯೆ ದೇವಾಲಯಕ್ಕಾಗಿ ತಯಾರಿಸಲಾಗುತ್ತಿರುವ ವಿಶೇಷ ಅಗರಬತ್ತಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಬಳಸಲು ವಡೋದರಾ ನಗರದಲ್ಲಿ ಬರೋಬ್ಬರಿ 108 ಅಡಿ ಉದ್ದ ಮತ್ತು 3.5 ಅಡಿ ಅಗಲದ ಅಗರಬತ್ತಿ ತಯಾರಿಸಲಾಗುತ್ತಿದೆ. ಇದು 3,500 ಕಿ.ಗ್ರಾಂ. ತೂಕವಿದ್ದು, ರಸ್ತೆಯ ಮೂಲಕ ಇದನ್ನು ಅಯೋಧ್ಯೆಗೆ ಸಾಗಿಸಲಾಗುತ್ತದೆ ಎಂದು ಹೇಳಲಾಗಿದೆ. ವಡೋದರಾದ ತರ್ಸಾಲಿ ಪ್ರದೇಶದ ನಿವಾಸಿ ವಿಹಾಭಾಯ್ ಭರ್ವಾಡ್ ಏಕಾಂಗಿಯಾಗಿ ಆರು ತಿಂಗಳಿನಿಂದ ತಮ್ಮ ಮನೆಯ ಹೊರಗೆ ಈ ಅಗರಬತ್ತಿಯನ್ನು ತಯಾರಿಸುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಭರ್ವಾಡ್ ಈ ಹಿಂದೆ 111 ಅಡಿ ಉದ್ದದ ಅಗರಬತ್ತಿಯನ್ನು ಯಶಸ್ವಿಯಾಗಿ ತಯಾರಿಸಿದ್ದರು.

ಸಾವಯವ ವಸ್ತುಗಳನ್ನು ಬಳಸಿ ಈ 108 ಅಡಿ ಉದ್ದದ ಅಗರಬತ್ತಿಯನ್ನು ತಯಾರಿಸಲಾಗಿದ್ದು, ಇದಕ್ಕೆ 3,000 ಕೆಜಿ ಗಿರ್ ಹಸುವಿನ ಸೆಗಣಿ, 91 ಕೆಜಿ ಗಿರ್ ಹಸುವಿನ ತುಪ್ಪ, 280 ಕೆಜಿ ದೇವದಾರ್ ಮರದ ಭಾಗ, 370 ಕೆಜಿ ಕೊಬ್ಬರಿ ಪುಡಿ ಮತ್ತಿತರ ವಸ್ತುಗಳನ್ನು ಬಳಸಲಾಗಿದೆ. ಈ ಅಗರಬತ್ತಿ ತಯಾರಿಸಲು ವಿಹಾಭಾಯ್ ಪ್ರತಿದಿನ ಎರಡರಿಂದ ಮೂರು ಗಂಟೆಗಳನ್ನು ಮೀಸಲಿಟ್ಟಿದ್ದು, ಸ್ಥಳೀಯ ಸಂಸದ ರಂಜನ್‌ಬೆನ್‌ ಭಟ್ ಮತ್ತು ಅವರ ತಂಡ ಸಹಾಯ ಹಸ್ತ ನೀಡುತ್ತಿದೆ. ಇದರ ತಯಾರಿಕೆಗೆ ಒಟ್ಟು 5.30 ಲಕ್ಷ ರೂ. ಖರ್ಚಾಗಲಿದೆ. ವಡೋದರಾ ಅಯೋಧ್ಯೆಯಿಂದ ಸುಮಾರು 1,800 ಕಿ.ಮೀ ದೂರದಲ್ಲಿದ್ದು, ಈ ಬೃಹತ್‌ ಅಗರಬತ್ತಿಯನ್ನು ಟ್ರಕ್‌ ಮೂಲಕ ಸಾಗಿಸಲು ವಿಹಾಭಾಯ್ ಯೋಜನೆ ರೂಪಿಸಿದ್ದಾರೆ. ಒಮ್ಮೆ ಈ ಅಗರಬತ್ತಿಯನ್ನು ಬೆಳಗಿದರೆ ಅದು ನಿರಂತರ 45 ದಿನಗಳವರೆಗೆ ಉರಿಯುತ್ತಲೇ ಇರಲಿದೆ ಎಂದು ವಿಹಾಭಾಯ್ ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here