ಮಂಗಳೂರು: ಅಂತರ್ ರಾಜ್ಯ ಸ್ಪಿರಿಟ್ ದಂಧೆ ಆರೋಪಿಯ ಜಾಮೀನು ಅರ್ಜಿಯನ್ನು ಮಂಗಳೂರಿನ 6ನೇ ನ್ಯಾಯಾಲಯದ ನ್ಯಾಯಾಧೀಶರು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಉಳ್ಳಾಲ ತಾಲೂಕು ಕಿನ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿತ್ಯಾನಂದ ಭಂಡಾರಿ ಬಿನ್ ನಾರಾಯಣ ಭಂಡಾರಿಗೆ ಸೇರಿದ ಸಾಂತ್ಯ ಮಾರುಜಾಗ ಮನೆಯಲ್ಲಿ ಅಕ್ರಮವಾಗಿ 35 ಲೀಟರ್ ಗಾತ್ರದ 64 ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಒಟ್ಟು 2240 ಲೀಟರ್ ದೊಡ್ಡ ಪ್ರಮಾಣದ ಮದ್ಯಸಾರ, ಸ್ಪಿರಿಟ್ ಮತ್ತು ಹದಿಮೂರು ಪ್ಲಾಸ್ಟಿಕ್ ಚೀಲದಲ್ಲಿ 90 ಎಂ ಎಲ್ ನ 2475 ಸಿಲ್ವರ್ ಕಪ್ ಬ್ರಾಂಡಿ ಹೆಸರಿನ ಒಟ್ಟು 222.750. ಲೀಟರ್ ನಕಲಿ ಬ್ರಾಂಡಿಯನ್ನು ತಯಾರಿಸುತ್ತಿದ್ದ ಘಟಕವನ್ನು ಪತ್ತೆಹಚ್ಚಿ ಸುಮಾರು 3,50,000 ಮೌಲ್ಯದ ಸ್ವತ್ತುಗಳನ್ನು ಅಬಕಾರಿ ಇಲಾಖೆಯ ಮಂಗಳೂರು ದಕ್ಷಿಣ ವಲಯ-1 ರ ಅಧಿಕಾರಿ ಕಮಲ ಹೆಚ್ ಮತ್ತು ತಂಡದವರು ವಶಪಡಿಸಿಕೊಂಡು, ಅ.ಕ್ರ ಸಂಖ್ಯೆ-22-2023-24 ರಂತೆ ಪ್ರಕರಣ ದಾಖಲಿಸಿದ್ದರು.
ಆರೋಪಿ ನಿತ್ಯಾನಂದ ಭಂಡಾರಿಯನ್ನು ಬಂಧಿಸಿ ಮಂಗಳೂರಿನ 6ನೇ ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು. ಆರೋಪಿಯು ಕೇರಳ ರಾಜ್ಯಕ್ಕೆ ಸರಬರಾಜು ಮಾಡುವ ಉದ್ದೇಶದಿಂದ ನಕಲಿ ಮದ್ಯವನ್ನು ಸಂಗ್ರಹಿಸಿ ಇಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿತ್ತು. ಆರೋಪಿಯು ಜಾಮೀನು ಕೋರಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ವೇಳೆ ಸಹಾಯಕ ಸರಕಾರಿ ಅಭಿಯೋಜಕರು ಬಲವಾದ ಆಕ್ಷೇಪಣೆ ಸಲ್ಲಿಸಿ ಸಮಾಜ ಘಾತುಕ ಹಾಗೂ ಅಂತರ್ ರಾಜ್ಯ ನಕಲಿ ಮದ್ಯ ದಂಧೆಯ ಕುರಿತು ಸವಿವರವಾದ ಮಾಹಿತಿ ನೀಡಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಆರೋಪಿಯ ಜಾಮೀನು ಅರ್ಜಿಯನ್ನು ವಜಾ ಗೊಳಿಸುವಂತೆ ವಾದಿಸಿದ್ದರು. ಅಭಿಯೋಜಕರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರಿನ ಬೆಟ್ಟಂಪಾಡಿಯ ಜನಾರ್ದನ್ ವಾದ ಮಂಡಿಸಿದ್ದರು.