ದ.ಕ ಜಿಲ್ಲೆಯಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆಗಿಲ್ಲ, ಅಡ್ಡಿ ಆತಂಕ-ಕೋವಿಡ್ ಜಾಗೃತಿ ಅಗತ್ಯ ಎಂದ ಸಚಿವ ದಿನೇಶ್ ಗುಂಡೂರಾವ್‌

ಮಂಗಳೂರು: ಜಿಲ್ಲೆಯಲ್ಲಿ ಪ್ರತಿ ದಿನ 330 ಕೋವಿಡ್ ಪರೀಕ್ಷೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಕೇರಳದ ಗಡಿ ಭಾಗದಲ್ಲಿರುವ ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರೀಕ್ಷೆಗೆ ಹೆಚ್ಚಿನ ಗುರಿಗಳನ್ನು ನೀಡಲಾಗಿದೆ. ಇದರಿಂದ ಪರಿಸ್ಥಿತಿ ಅವಲೋಕನ ಸಾಧ್ಯವಾಗುತ್ತದೆ. ಹೊಸ ವರ್ಷ ಮತ್ತು ಕ್ರಿಸ್ಮಸ್ ಆಚರಣೆಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಜನಸಂದಣಿ ಇರುವ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ. ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜುಗಳು ಸೇರಿದಂತೆ ಇತರೇ ಕಾಲೇಜುಗಳಲ್ಲಿ ಕೋವಿಡ್ ಲಕ್ಷಣಗಳು ಹೊಂದಿರುವುದು ಕಂಡು ಬಂದರೆ ಕೇರಳದ ವಿದ್ಯಾರ್ಥಿಗಳನ್ನು ಪರೀಕ್ಷೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 1,922 ಹಾಸಿಗೆ ಸೇರಿದಂತೆ ಒಟ್ಟು 12,908 ಹಾಸಿಗೆಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 1,698 ಆಮ್ಲಜನಕ ಬೆಂಬಲಿತ ಪ್ರತ್ಯೇಕ ಹಾಸಿಗೆಗಳು ಮತ್ತು 722 ಐಸಿಯು ಹಾಸಿಗೆಗಳಿವೆ. ವೆಂಟಿಲೇಟರ್‌ಗಳ ಇರುವ 336 ಹಾಸಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. 2,633 ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ಇದ್ದು, 409 ರಾಟ್ ಕಿಟ್‌ಗಳಿವೆ. 15,407 ಪಿಪಿಇ ಕಿಟ್‌ಗಳಿವೆ. ಜಿಲ್ಲೆಯಲ್ಲಿ 17 ಪಿಎಸ್ ಎ ಆಮ್ಲಜನಕ ಘಟಕಗಳು, 22 ಆಮ್ಲಜನಕ ಶೇಖರಣಾ ಟ್ಯಾಂಕ್‌ಗಳ ಜತೆಗೆ ಜಿಲ್ಲೆಯಲ್ಲಿ 583 ಆಮ್ಲಜನಕ ಘಟಕ ಕಾರ್ಯನಿರ್ವಹಿಸುತ್ತಿವೆ ಎಂದರು.

ಇನ್‌ಫ್ಲುಯೆಂಜಾ ತರಹದ ಕಾಯಿಲೆ (ಐಎಲ್‌ಐ) ಮತ್ತು ತೀವ್ರತರವಾದ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿಗಾ ಇಡಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಸನ್ನದ್ಧತೆ ಕುರಿತು ಅಣಕು ನಡೆಸಲಾಗಿದೆ. ನಿಗಾ ಹೆಚ್ಚಿಸುವಂತೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಕೇರಳದ ಗಡಿಯಲ್ಲಿರುವ ಐದು ಚೆಕ್ ಪೋಸ್ಟ್‌ಗಳಲ್ಲಿ ರೋಗಿಗಳನ್ನು ಪರೀಕ್ಷಿಸಲು ಮತ್ತು ಕೋವಿಡ್ ಕುರಿತು ಜಾಗೃತಿ ಮೂಡಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಜಾಗೃತಿ ಮೂಡಿಸಲು ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್‌ಗಳು ಲಭ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಿಪಿಇ ಕಿಟ್‌ಗಳನ್ನು ಖರೀದಿಸಲಾಗುತ್ತಿದೆ, 40 ವರ್ಷದ ರೋಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಅಸ್ವಸ್ಥತೆಯಿಂದ ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಅವರು ಮಧುಮೇಹ ಮತ್ತು ಮದ್ಯವ್ಯಸನಿಯಾಗಿದ್ದರು ಎಂದು ಹೇಳಲಾಗಿದೆ. ಇದು ಕೋವಿಡ್ ಕಾರಣವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಮೂರು ಕೋವಿಡ್ ಪ್ರಕರಣಗಳು ವರದಿ ಆಗಿವೆ ಎಂದರು. ಕೋವಿಡ್-ನಿರ್ವಹಣೆಗಾಗಿ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಸೋಮವಾರ ಅಥವಾ ಮಂಗಳವಾರ ಸಮಿತಿಯ ಸಭೆ ನಡೆಯಲಿದ್ದು, ಪರಿಸ್ಥಿತಿ ಅವಲೋಕಿಸುವ ಸಾಧ್ಯತೆ ಇದೆ ಎಂದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಿಇಒ ಡಾ, ಆನಂದ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

LEAVE A REPLY

Please enter your comment!
Please enter your name here